ಜಿಲ್ಲೆ

ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ

Mangaluru - Hariprasad Rai


ಮಂಗಳೂರು : ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ 80ನೇ ವಿಶ್ವಸಂಸ್ಥೆಯ
ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ್ದಾರೆ.
ಭಾರತದ ವಿವಿಧ ಪಕ್ಷಗಳ ಸಂಸದರನ್ನು ಒಳಗೊಂಡಿರುವ ಎರಡು ನಿಯೋಗ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಈ ಅಧಿವೇಶನದಲ್ಲಿ
ಭಾಗವಹಿಸಲಿದೆ. ರಾಜಸ್ತಾನ ಬಿಜೆಪಿ ಸಂಸದ ಪಿ.ಪಿ.ಚೌಧರಿ ನೇತೃತ್ವದ ನೇತೃತ್ವದ ಮೊದಲ ನಿಯೋಗವು ಅ.8ರಿಂದ 14ರವರೆಗೆ ನಡೆಯುವ
ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಈ ತಂಡದಲ್ಲಿ 15 ಮಂದಿ ಸದಸ್ಯರಿದ್ದು ಕರ್ನಾಟಕದಿಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸ್ಥಾನ ಪಡೆದಿದ್ದಾರೆ.
ಸುಮಾರು ಎರಡು ದಶಕಗಳ ಬಳಿಕ ಭಾರತದ ಸಂಸದೀಯ ರಾಜತಾಂತ್ರಿಕತೆಯನ್ನು ಪುನರುಜ್ಜೀವಗೊಳಿಸುವ ಪ್ರಧಾನಮಂತ್ರಿ
ನರೇಂದ್ರ ಮೋದಿ ಅವರ ಆಶಯದಂತೆ ಈ ನಿಯೋಗವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿದೆ. ಅಂತಾರಾಷ್ಟ್ರೀಯ
ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಉತ್ತಮಪಡಿಸುವುದು, ಜಾಗತಿಕ ಮಟ್ಟದ ಸಭೆಯಲ್ಲಿ ಭಾರತವನ್ನು ಅಧಿಕಾರಿಗಳ
ಹೊರತಾಗಿ ಪ್ರತಿನಿಧಿಸುವುದು, ವಿಶ್ವಸಂಸ್ಥೆಯಲ್ಲಿ ಸಂಸದೀಯ ಪ್ರಜಾಪ್ರಭುತ್ವ ದೇಶದ ಪ್ರತಿನಿಧಿಗಳಾಗಿ ಪ್ರಜಾತಂತ್ರದ
ಮೌಲ್ಯಗಳನ್ನು ಪ್ರಚುರಪಡಿಸುವುದು ಈ ನಿಯೋಗದ ಉದ್ದೇಶವಾಗಿದೆ. 15 ಸಂಸದರ ಎರಡನೇ ನಿಯೋಗವು ಈ ತಿಂಗಳ ಅಂತ್ಯದಲ್ಲಿ
ಬಿಜೆಪಿ ಸಂಸದೆ ಡಿ. ಪುರಂದೇಶ್ವರಿ ನೇತೃತ್ವದಲ್ಲಿ ನ್ಯೂಯಾರ್ಕ್‌ಗೆ ಪ್ರಯಾಣಿಸಲಿದೆ.
........................................................