ವಿಜಯವಾಣಿ ಸುದ್ದಿಜಾಲ ಮಂಗಳೂರು
ಯೋಧ ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿದಂತೆ ಬ್ರಿಜೇಶ್ ಚೌಟ ಅವರು ಕ್ಷೇತ್ರದ ಅಭಿವೃದ್ಧಿಗೆ, ಜನರ ಕಷ್ಟ, ನೋವು, ದುಃಖಗಳ ಪರಿಹಾರಕ್ಕಾಗಿ ಕ್ಷೇತ್ರದ ಪ್ರತಿನಿಧಿಯಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾರೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ನೂತನ ಕಚೇರಿ ಕೆಲಸ ಮಾಡಲಿ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಕಚೇರಿಯನ್ನು ಮಂಗಳೂರಿನ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ನೂತನ ಕಚೇರಿ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಯಕರ್ತರ, ಹಿಂದುತ್ವದ ಧ್ವನಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಳೆದ ಮೂರು ದಶಕಗಳಿಂದ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಂಸದರು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಬ್ರಿಜೇಶ್ ಚೌಟ ಅವರೂ ನೂತನ ಕಚೇರಿ ಮೂಲಕ ಜಿಲ್ಲೆಯ ಜನತೆ, ಕಾರ್ಯಕರ್ತರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಪ್ರತಾಪಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಎನ್.ಯೋಗೀಶ್ ಭಟ್, ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ, ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಜಯಾನಂದ ಅಂಚನ್ ಮುಂತಾದವರು ಶುಭ ಹಾರೈಸಿದರು.
-----
ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ, ಅವಕಾಶ ಕಲ್ಪಿಸುವ ಕೆಲಸವನ್ನು ಪಕ್ಷ ಮಾಡಿಕೊಂಡು ಬಂದಿದೆ. ಅದನ್ನೇ ಮುಂದುವರಿಸುತ್ತೇನೆ. ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ನೀಡಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ದಕ್ಷಿಣ ಕನ್ನಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುವುದು.
ಕ್ಯಾ. ಬ್ರಿಜೇಶ್ ಚೌಟ, ಸಂಸದ