ಪುತ್ತೂರು: ಶಿರಾಡಿ ಸುರಂಗದಲ್ಲಿ ರೈಲ್ವೆ ಹಾಗೂ ರಸ್ತೆಗಾಗಿ ಜಂಟಿ ಸಮೀಕ್ಷೆ ನಡೆದಿದೆ. ಈ ಸಂದರ್ಭ ರಸ್ತೆಗೆ ಅಲೈನ್‌ಮೆಂಟ್ ಸಮಸ್ಯೆಯಾಗುವುದಿಲ್ಲ. ಆದರೆ ರೈಲ್ವೆಗೆ ಅಲೈನ್‌ಮೆಂಟ್ ಜತೆಗೆ ಗ್ರೇಡಿಯೆಂಟ್ ಆಗಬೇಕಾಗಿದೆ. ಎರಡೂ ಇಲಾಖೆಗಳು ಪ್ರತ್ಯೇಕ ಸರ್ವೇ ಮಾಡಲಿದ್ದಾರೆ. ವಂದೇ ಭಾರತ್ ಓಡಿಸಲು ಹಲವು ತಾಂತ್ರಿಕ ಪರಿಶೀಲನೆಯನ್ನು ಅಧಿಕಾರಿಗಳು ನಡೆಸುತ್ತಿದ್ದು, ಶೀಘ್ರ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಮಯ ನಿಗದಿಯಾದ ಬಳಿಕ ಪುತ್ತೂರಿನಲ್ಲಿ ನಿಲುಗಡೆಯಾಗಬೇಕೆಂಬ ಬೇಡಿಕೆಯನ್ನು ಗಮನಕ್ಕೆ ತರಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಗ್ರೇಡಿಯೆಂಟ್ ೧ಃ೫೦ ಈಗ ಇದ್ದು, ಮುಂದೆ ೧ಃ೧೫೦ ಆಗಬೇಕೆಂಬ ನಿರೀಕ್ಷೆಯಿದೆ. ರೈಲ್ವೆ ಇಲಾಖೆಗೆ ಗ್ರೇಡಿಯೆಂಟ್ ಸಿಗಲು ೮೮ ಕಿ.ಮೀ. ದೂರದ ಅಗತ್ಯವಿದ್ದರೆ ರಸ್ತೆ ಸಾರಿಗೆಯವರಿಗೆ ಕೇವಲ ೩೮ ಕಿ.ಮೀ. ಇದು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎರಡೂ ಇಲಾಖೆಗಳು ಪ್ರತ್ಯೇಕ ಸರ್ವೇ ಮಾಡಲಿದ್ದಾರೆ. ರಸ್ತೆಯ ಡಿಪಿಆರ್ ಸಿದ್ಧವಾಗುತ್ತಿದ್ದು ಅಲೈನ್‌ಮೆಂಟ್ ಮಾಡಲಾಗುತ್ತಿದೆ. ಮಳೆಗಾಲದ ಅಧಿವೇಶನದಲ್ಲಿ ಸಬಂಧಪಟ್ಟವರನ್ನು ಭೇಟಿ ಮಾಡಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ಮಂಗಳೂರು-ಬೆಂಗಳೂರು ನಡುವೆ ಸದ್ಯಕ್ಕೆ ಒಂದೇ ಹಾದಿ ಇದೆ. ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸದೆ ಹೆಚ್ಚು ರೈಲುಗಳನ್ನು ಓಡಿಸಬೇಕೆಂಬ ಬೇಡಿಕೆ ಪ್ರಾಯೋಗಿಕವಾಗಿ ಸರಿಯಲ್ಲ. ಹಾಸನ- ಮಂಗಳೂರು ರೈಲ್ವೆ ಕಾರ್ಪೊರೇಷನ್ ಅನ್ನು ಭಾರತೀಯ ರೈಲ್ವೆ ಜತೆಗೆ ವಿಲೀನಗೊಳಿಸಿ, ಮಂಗಳೂರು ಬೆಂಗಳೂರು ಎರಡು ಮಾರ್ಗ ರಚಿಸಬೇಕಾಗಿದೆ. ಇದರಿಂದ ಘಾಟಿಯಲ್ಲಿನ ಗ್ರೇಡಿಯೆಂಟ್ ಬದಲಾವಣೆಗೂ ಸಹಕಾರಿಯಾಗಲಿದೆ. ದೀರ್ಘಕಾಲಿನ ಯೋಜನೆಯನ್ನು ರೂಪಿಸಲಾಗುತ್ತಿದೆ. ಪುತ್ತೂರು ಎಪಿಎಂಸಿ ರೈಲ್ವೆ ಮೇಲ್ಸೇತುವೆಯ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಲಾಗುವುದು ಎಂದು ಸಂಸದ ಚೌಟ ತಿಳಿಸಿದರು.
ಉತ್ತರಿಸದೆ ತೆರಳಿದರು
ಆರ್‌ಎಸ್‌ಎಸ್ ನೋಂದಣಿಯ ಬಗ್ಗೆ ಪ್ರಶ್ನಿಸಿದಾಗ ಧನ್ಯವಾದ ಎಂದಷ್ಟೇ ಉತ್ತರಿಸಿದ ಸಂಸದ ಚೌಟ, ರಸಗೊಬ್ಬರ ಹಾಗೂ ಮೈಲುತುತ್ತು ದರ ಏರಿಕೆ ಪ್ರಶ್ನೆಗೆ ಮೇಲಿನವರು ನೀಡಿದ ಹೇಳಿಕೆಯೇ ನನ್ನದು ಎಂದು ಉತ್ತರಿಸದೆ ತೆರಳಿದರು.
"
ಮಾಣಿ-ಮೈಸೂರು ಹೆದ್ದಾರಿಯ ವಿಚಾರದಲ್ಲಿ ಇಲಾಖೆಗಳ ನಡುವೆ ಗೊಂದಲಗಳಿದೆ. ಈಗಾಗಲೇ ಒಂದು ಹಂತದ ಡಿಪಿಆರ್ ಸಿದ್ಧಗೊಂಡಿದೆ. ಮಳೆಗಾಲದ ಅಧಿವೇಶನದಲ್ಲಿ ಎರಡೂ ಇಲಾಖೆಯ ಅಧಿಕಾರಿಗಳ ಕಾರ್ಯದರ್ಶಿ ಹಂತದಲ್ಲಿ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾಣಿ-ಸಂಪಾಜೆ ಚತುಷ್ಪಥ ಮಾಡುವ ವಿಚಾರದಲ್ಲಿ ಬದ್ಧರಾಗಿದ್ದೇವೆ.
— ಕ್ಯಾ.ಬ್ರಿಜೇಶ್ ಚೌಟ, ಸಂಸದ