ಜಿಲ್ಲೆ

ತುರ್ತು ಔಷಧ ಖರೀದಿಗೂ ಬರ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಂಸದ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಕಾಪಾಡಲೂ ಆಗದ ಬೇಜವಾಬ್ದಾರಿ ಸರ್ಕಾರ ಆಡಳಿತದಲ್ಲಿದ್ದು, ತನ್ನ ಪ್ರಥಮ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿಯಲ್ಲಿ ಜನ ಸಂಪರ್ಕ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾನವ ಅಭಿವೃದ್ಧಿ ಸೂಚ್ಯಂಕ ಮೊದಲಿನಿಂದಲೂ ಪ್ರಮುಖವಾಗಿದ್ದು. ತಾಯಂದಿರ ಮರಣ ಪ್ರಮಾಣ ಮೊದಲು ರಾಯಚೂರು ಮತ್ತು ಯಾದಗಿರಿಯಲ್ಲಿ ಮಾತ್ರ ಇತ್ತು. ಅದರೆ, ಇಂದಿನ ಸರ್ಕಾರದಲ್ಲಿ ಆರೋಗ್ಯ ನಿರ್ವಹಣೆಯಲ್ಲಿ ಎಡವಿದ್ದರಿಂದ ಪೂರ್ವಭಾವಿ ಕಾಳಜಿ ವಹಿಸದೇ ಇದ್ದಿದ್ದರಿಂದ ತೊಂದರೆ ಆಗುತ್ತಿದೆ. ಜತೆಗೆ ಔಷಧ ಖರೀದಿಯ ನೀತಿಯಲ್ಲಿ ದೋಷ ಇದ್ದು, ಬಹಳ ಭ್ರಷ್ಟಾಚಾರ ಆಗುತ್ತಿದೆ. ಅಗ್ಗದ ದರದಲ್ಲಿ ಔಷಧ ಖರೀದಿ ಮಾಡಲಾಗುತ್ತಿದೆ. ಜತೆಗೆ ಲಾಂಗ್ ಟಮ್ರ್ ಔಷಧ ಖರೀದಿ ಮಾಡುತ್ತಿಲ್ಲ. ಲಾಂಗ್ ಟಮ್ರ್ ಔಷಧ ತೆಗೆದುಕೊಳ್ಳುವ ಪದ್ಧತಿ ಬಿಟ್ಟು, ಈಗ ಪ್ರತಿ ತಿಂಗಳು ಔಷಧ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಗುಣಮಟ್ಟ ಪರೀಕ್ಷೆ ಮಾಡಲು ಅವಕಾಶ ಸಿಗುವುದಿಲ್ಲ. ಗುಣಮಟ್ಟ ಇಲ್ಲದ ಔಷಧ ಕೊಟ್ಟಿದ್ದರಿಂದ ಬಾಣಂತಿಯರ ಸಾವಿನಂತಹ ಸಮಸ್ಯೆ ಆಗುತ್ತಿವೆ ಎಂದರು.

ತನಿಖೆ ಆಗಬೇಕು; ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ನಡೆದು ಒಂದು ತಿಂಗಳು ಕಳೆದರೂ ತನಿಖೆ ವರದಿ ಏನಾಗಿದೆ ಎಂಬುದು ಗೊತ್ತಿಲ್ಲ. ಬೆಳಗಾವಿ, ಬಳ್ಳಾರಿ, ರಾಯಚೂರಿನಲ್ಲಿ ಮತ್ತೆ ಗರ್ಭಿಣಿ ಸಾವು ಆಗಿದೆ. ಬೇಜವಾಬ್ದಾರಿಯುತ ಸರ್ಕಾರಕ್ಕೆ ಗರ್ಭಿಣಿಯರ ಮತ್ತು ತಾಯಿಂದಿರ ಆರೋಗ್ಯ ನೋಡಲು ಆಗುತ್ತಿಲ್ಲ ಎಂದು ಆರೋಪಿಸಿದರು.

ಹಾವೇರಿ ಜಿಲ್ಲೆಯಲ್ಲಿ ಬಾಣಂತಿಯರು ಹೊರ ಜಿಲ್ಲೆಗೆ ಹೋಗುವ ಪರಸ್ಥಿತಿ ಜಿಲ್ಲಾಸ್ಪತ್ರೆಯಲ್ಲಿ ಇದೆ. ಇಲ್ಲಿನ ಬಾಣಂತಿಯರು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಾರೆ ಇದಕ್ಕೆ ರಾಜ್ಯಮಟ್ಟದಲ್ಲಿ ಕಾಯಕಲ್ಪ ನೀಡಬೇಕು. ಇದು ಗಂಭೀರವಾದ ವಿಚಾರ. ಆದರೆ, ಗಂಭೀರತೆ ಈ ಸರ್ಕಾರದಲ್ಲಿ ಕಾಣುತ್ತಿಲ್ಲ. ಈ ಸರ್ಕಾರದಲ್ಲಿ ತುರ್ತಾಗಿ ಬೇಕಾದ ಔಷಧ ಖರೀದಿ ಮಾಡಲು ಹಣ ಇಲ್ಲ. ಮೊನ್ನೆ ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸುಟ್ಟ ಗಾಯವಾದರೆ, ಬರ್ನಲ್ ಇರಲಿಲ್ಲ. ಇಂತಹ ಪರಿಸ್ಥಿತಿ ಕರ್ನಾಟಕಕ್ಕೆ ಯಾವತ್ತೂ ಬಂದಿರಲಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅಣುಸ್ಥಾವರ ಅವಸರ ಬೇಡ: ರಾಜ್ಯದಲ್ಲಿ ಮತ್ತೊಂದು ಅಣುಸ್ಥಾವರ ನಿರ್ವಣದ ಅಗತ್ಯ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಣುಸ್ಥಾವರ ನಿರ್ವಣದ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು. ಈಗ ಸಾಕಷ್ಟು ನವೀಕರಣ ಇಂಧನಗಳು ಬಂದಿವೆ. ಅಣುಸ್ಥಾವರ ಸ್ಥಾಪನೆಯಿಂದ ಸುತ್ತಲಿನ ಪರಿಸರದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಆಲೋಚನೆ ಮಾಡಬೇಕು. ಅಣುಸ್ಥಾವರ ನಿರ್ವಣಕ್ಕೆ ಒಂದು ನೀತಿ ಇದೆ. ಅದನ್ನು ಅನುಸರಿಸದೇ ಯಾವುದೇ ರೀತಿಯ ಅವಸರದ ಕ್ರಮ ಸರಿಯಲ್ಲ ಎಂದು ಹೇಳಿದರು.