ಆನೇಕಲ್: ರಾಜ್ಯ ಚಿಟ್ಟೆಯ ಮಾನ್ಯತೆ ಪಡೆದಿರುವ ದೇಶದ ಅತಿದೊಡ್ಡ ಪಾತರಗಿತ್ತಿಯಾದ ಕನ್ನಡ ಬಣ್ಣದ ಚಿಟ್ಟೆಯ (ಸದರ್ನ್ ಬರ್ಡ್ ವಿಂಗ್) ಚಲನವಲನ, ಚಟುವಟಿಕೆ ದಾಖಲಿಸಿದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಉದ್ಯಾನದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಎಚ್.ವಘೆಲಾ ವಿಡಿಯೋ ಬಿಡುಗಡೆ ಮಾಡಿದರು. ಈ ವಿಡಿಯೋವನ್ನು ವನ್ಯಜೀವಿ ಉತ್ಸಾಹಿ ಮತ್ತು ಛಾಯಾಗ್ರಾಹಕರಾದ ಸಿದ್ಧಾರ್ಥ್ ಟಿ.ಜೆ. ಅವರು ನಿರ್ಮಿಸಿದ್ದು, ರಿಕ್ಕಿ ಕೇಜ್ ಸಂಗೀತ ನೀಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದೆ.
ರೆಕ್ಕೆಯಲ್ಲಿದೆ ಕನ್ನಡ ಧ್ವಜದ ಬಣ್ಣ!: ಸದರ್ನ್ ಬರ್ಡ್ ವಿಂಗ್ ಚಿಟ್ಟೆಯನ್ನು ವೈಜ್ಞಾನಿಕವಾಗಿ ಟ್ರೋಡೆಸ್ ಮಿನೂಸ್ ಎಂದು ಕರೆಯಲಾಗುತ್ತದೆ. ಈ ಚಿಟ್ಟೆಯ ಬಣ್ಣ ಕನ್ನಡ ಧ್ವಜದ ಹಳದಿ ಮತ್ತು ಕೆಂಪು ಬಣ್ಣಗಳಿಗೆ ಹೊಂದಿಕೆಯಾಗುತ್ತದೆ. ಈ ಚಿಟ್ಟೆ ಸುಮಾರು 140-190 ಮಿ.ಮೀ. ಗಾತ್ರದ ರೆಕ್ಕೆ ಹೊಂದಿದೆ. ಇದು ಭಾರತದ ಅತಿದೊಡ್ಡ ಚಿಟ್ಟೆಯಾಗಿದ್ದು, ದಕ್ಷಿಣ ಭಾರತಕ್ಕೆ ಸ್ಥಳೀಯವಾಗಿದೆ. ಕರ್ನಾಟಕದಲ್ಲಿ ಹೇರಳವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ‌್ಯನಿರ್ವಾಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಪಶ್ಚಿಮಘಟ್ಟದ ನಿತ್ಯ ಹಸುರಿನ ಕಾಡು, ಕರಾವಳಿ ಮತ್ತು ಬಯಲು ಪ್ರದೇಶಗಳಲ್ಲಿ ಈ ಆಕರ್ಷಕ ಪಾತರಗಿತ್ತಿಗಳು ಯಥೇಚ್ಛವಾಗಿ ಕಾಣಸಿಗುತ್ತವೆ.