ಶಿರಸಿ: ರಾಜ್ಯದಲ್ಲಿ ಕನ್ನಡಿಗರಿಗೇ ಉದ್ಯೋಗ ಲಭಿಸಬೇಕು. ಕೆಲ ಖಾಸಗಿ ಕಂಪನಿಗಳು ರಾಜ್ಯದ ಯುವಕರನ್ನು ನಿರ್ಲಕ್ಷಿಸಿ ಬೇರೆ ರಾಜ್ಯದವರಿಗೆ ಮಣೆ ಹಾಕುತ್ತಿದ್ದಾರೆ. ಇದನ್ನು ಖಂಡಿಸಿ ಬದಾಮಿಯಿಂದ ಭುವನಗಿರಿಯವರೆಗೆ ಅ.16ರಿಂದ ಚಳವಳಿ ನಡೆಸಲಿದ್ದೇವೆ ಎಂದು ಕದಂಬ ಸೇನೆ ಅಧ್ಯಕ್ಷ ಬೇಕ್ರಿ ರಮೇಶ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.16 ಮತ್ತು 17ರಂದು ಬದಾಮಿಯಲ್ಲಿ ಸಭಾ ಕಾರ್ಯಕ್ರಮ ಮತ್ತು ಪ್ರತಿಭಟನೆ ನಡೆಸಲಾಗುವುದು. ಸಿದ್ದಾಪುರದ ಭುವನಗಿರಿಯಲ್ಲಿ ಅ. 22 ರಂದು ಈ ಚಳವಳಿ ಮುಕ್ತಾಯಗೊಳಿಸಲಾಗುವುದು ಎಂದರು.
ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಾಯ್ದೆ ಜಾರಿಗೊಳಿಸದೆ, ಕೇವಲ ವಲಸಿಗರಿಗೆ ಅನುಕೂಲ ಮಾಡಲಾಗುತ್ತಿದೆ. 15 ವರ್ಷಗಳಲ್ಲಿ ವಲಸಿಗರ ಸಂಖ್ಯೆ 8 ಪಟ್ಟು ಹೆಚ್ಚಳವಾಗಿದೆ. ಡಾ.ಸರೋಜನಿ ಮಹಿಷಿ ಪರಿಷ್ಕೃತ 2017ರ ವರದಿ ಕಾಯ್ದೆಯಾಗಿ ತರುವಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಸಂಪೂರ್ಣ ನಿರ್ಲಕ್ಷೃ ಮಾಡಿವೆ. ಖಾಸಗಿ ಉದ್ಯಮಿಗಳ ಹಿಡಿತದಲ್ಲಿ ಸರ್ಕಾರಗಳು ಸಿಲುಕಿಕೊಂಡಿವೆ ಎಂದು ಆರೋಪಿಸಿದರು.
ಕದಂಬ ಮಯೂರ ವರ್ಮ, ಚಾಲುಕ್ಯ ಇಮ್ಮಡಿ ಪುಲಿಕೇಶಿ ಪುತ್ಥಳಿ ಸ್ಥಾಪಿಸಲು ಸರ್ಕಾರ ನಿರ್ಲಕ್ಷ್ಯವಹಿಸಿದ್ದು, ಹರಿದು ಹಂಚಿ ಹೋಗಿದ್ದ ಕನ್ನಡಿಗರ ನಾಡನ್ನು ಒಂದುಗೂಡಿಸಿ ಪ್ರಪ್ರಥಮ ಕನ್ನಡ ಸಾಮ್ರಾಜ್ಯ ಸ್ಥಾಪಿಸಿದ ಮಯೂರ ವರ್ಮ ಪುತ್ಥಳಿಯನ್ನು ಬನವಾಸಿ, ಕಾರವಾರ, ಬೆಳಗಾವಿಯ ಸುವರ್ಣಸೌಧ, ಬೆಂಗಳೂರಿನ ವಿಧಾನಸೌಧದ ಮುಂದೆ ಸ್ಥಾಪಿಸಬೇಕು. 6ನೇ ಶತಮಾನದಲ್ಲಿ ಕನ್ನಡಿಗರ ಕೀರ್ತಿ ಪತಾಕೆಯನ್ನು ಭಾರತ ಹಾಗೂ ಬೇರೆ ರಾಷ್ಟ್ರಗಳಿಗೆ ತಲುಪಿಸಿದ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿಯನ್ನು ಬೆಂಗಳೂರು ವಿಧಾನಸೌಧ, ಬೆಳಗಾವಿಯ ಸುವರ್ಣ ಸೌಧ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಬೇಕು. ಬನವಾಸಿ ಅಭಿವೃದ್ಧಿ ಪ್ರಾಧಿಕಾರ 2017ರಲ್ಲಿ ಸ್ಥಾಪನೆಯಾಗಿ 5 ಕೋಟಿ ರೂ.ಮಂಜೂರಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ನಿರ್ಲಕ್ಷೃದಿಂದ 7 ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಮುಂದಿನ ಬಜೆಟ್‌ನಲ್ಲಿ 300 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ನಾಗರಾಜು ಅಕ್ಕಿಆಲೂರು, ತಾಲೂಕು ಸಂಚಾಲಕ ಗುತ್ಯಪ್ಪ ಮಾದರ ಬನವಾಸಿ ಇದ್ದರು.