ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧ ಸುಂದರೇಶ್ 
ಜಿಲ್ಲೆ

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಚಳವಳಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಕುಡಿಯುವ ನೀರು, ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಹಾಗೂ ಜಿಲ್ಲೆಯ ಮೂಲ ನಿವಾಸಿಗಳಿಗೆ ಭೂಮಿ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿ ಚಳವಳಿ ರೂಪಿಸಲು ಪಕ್ಷ ತೀರ್ಮಾನಿಸಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧ ಸುಂದರೇಶ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಲ ನಿವಾಸಿಗಳಿಗೆ ಭೂಮಿ ಹಂಚಿಕೆಯಾಗಬೇಕು. ಎಲ್ಲ ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಸೆಪ್ಟೆಂಬರ್‌ನಲ್ಲಿ ಮೊದಲನೇ ಹಂತವಾಗಿ ನಿವೇಶನ ರಹಿತರು ಮತ್ತು ಭೂಹೀನ ಮೂಲ ನಿವಾಸಿಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾಮಂಡಳಿ ಸಭೆಯಲ್ಲಿ ಮಲೆನಾಡು ಭಾಗದ ಭೂರಹಿತ ಮೂಲ ನಿವಾಸಿಗಳು ಮತ್ತು ನಿವೇಶನ ರಹಿತರ ಸಮಸ್ಯೆ ಕುರಿತು ಚರ್ಚೆನಡೆಸಲಾಯಿತು. ಮಲೆನಾಡಿನಲ್ಲಿ ಲಕ್ಷಾಂತರ ಎಕರೆ ಕಂದಾಯ ಭೂಮಿ ಇದ್ದು, ಬಹುಪಾಲನ್ನು ಶ್ರೀಮಂತರು ಒತ್ತುವರಿಮಾಡಿಕೊಂಡು ಅನುಭವಿಸುತ್ತಿದ್ದಾರೆ. ಕೃಷಿಯ ಮೂಲವನ್ನೇ ಅರಿಯದ ಹೊರ ಜಿಲ್ಲೆ ಮತ್ತು ರಾಜ್ಯದ ದೊಡ್ಡಬಂಡವಾಳಶಾಹಿಗಳು ಭೂಮಿ ಖರೀದಿಸುತ್ತಿದ್ದಾರೆ ಎಂದು ದೂರಿದರು.
ಮಲೆನಾಡಿನಲ್ಲಿ ಕೃಷಿಕಾರ್ಮಿಕರಾಗಿ ಕೆಲಸಮಾಡಿಕೊಂಡು ಬಂದಿರುವ, ಅದರಲ್ಲಿ ಪ್ರಮುಖವಾಗಿ ದಲಿತ ವರ್ಗದವರು ತಮ್ಮ ಗ್ರಾಮದಲ್ಲೇ ಪರಾಕೀಯರಾಗುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್ ಸರ್ಕಾರ ಭೂಮಿಯ ಒಡೆತನವಿರುವ ಭೂ ಮಾಲೀಕರಿಗೆ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಮುಂದಾಗುತ್ತಿದ್ದಾರೆ. ಭೂಹೀನ ಬಡವರ ಬಗ್ಗೆ ಯಾವುದೇ ಕಾಳಜಿ ತೋರಿದಂತೆ ಕಾಣುತ್ತಿಲ್ಲ ಎಂದು ಟೀಕಿಸಿದರು.
ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ ಮತ್ತು ತರೀಕೆರೆ ತಾಲೂಕುಗಳಲ್ಲಿ ಕೂಲಿಕೆಲಸ ಮಾಡಿಕೊಂಡು ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನ ನಿವೇಶನ ರಹಿತರಿದ್ದಾರೆ. ಈ ಕುರಿತು ಎರಡು ಪಕ್ಷದ ಜನಪ್ರತಿನಿಧಿಗಳು ಕೇವಲ ಹೇಳಿಕೆ ನೀಡುವ ಮೂಲಕ ಕಾಲಹರಣ ಮಾಡದೆ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಕೆ.ಎಸ್.ರಮೇಶ್ ಇದ್ದರು.