ಜಿಲ್ಲೆ

ಬಿಜೆಪಿಯಲ್ಲಿ ಮತ್ತೆ ಸಂಚಲನ

ಸುನಿಲ್ ಪೊನ್ನೇಟಿ

ಮಡಿಕೇರಿ:

ಸುಮಾರು 3 ದಶಕಗಳ ಕಾಲ ಬಿಜೆಪಿ ಸಾಮ್ರಾಜ್ಯ ಆಗಿದ್ದ ಕೊಡಗನ್ನು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ತನ್ನ ವಶ ಮಾಡಿಕೊಂಡ ಕಾಂಗ್ರೆಸ್ ನೀಡಿದ ಶಾಕ್‌ನಿಂದ ಕಮಲ ಪಾಳಯ ಇನ್ನೂ ಹೊರಬಂದಿಲ್ಲ. ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದ ಕಾರ್ಯಕರ್ತರು ಅಕ್ಷರಶಃ ಮೌನವಾಗಿಬಿಟ್ಟಿದ್ದರು. ನಾವಿಕನಿಲ್ಲದ ದೋಣಿಯಂತೆ ಆಗಿದ್ದ ಬಿಜೆಪಿಗೆ ಈಗ ಹೊಸ ರಾಜ್ಯಾಧ್ಯಕ್ಷರು ಬಂದಿದ್ದಾರೆ. ಈ ಬೆನ್ನಲ್ಲೇ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಗೆ ಪೈಪೋಟಿ ಶುರುವಾಗುವ ಮೂಲಕ ಕೊಡಗು ಬಿಜೆಪಿಯಲ್ಲಿ ಮತ್ತೆ ಚಟುವಟಿಕೆ ಕಾಣಿಸಿಕೊಂಡಿದೆ.

ಕೊಡಗಿನಲ್ಲಿ ಬಿಜೆಪಿ ಸಂಘಟನೆ ಆಧಾರದಲ್ಲಿ ನಿಂತಿದೆ. ಸಂಘ ಪರಿವಾರದ ಭದ್ರ ಅಡಿಪಾಯದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಚರಿಸುತ್ತಿದೆ. ಹಾಗಿದ್ದರೂ ವಿಧಾನ ಸಭಾ ಚುನಾವಣೆಯ ಸೋಲು ಕಾರ್ಯಕರ್ತರನ್ನು ಕಂಗೆಡಿಸಿತ್ತು. ಗ್ರಾಮ ಪಂಚಾಯಿತಿಯಿAದ ಲೋಕಸಭೆ ತನಕ ತಾವೇ ಅಧಿಕಾರದಲ್ಲಿ ಇದ್ದೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟಿರುವ ಪೆಟ್ಟು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿಯೇ ತಳಮಟ್ಟದಲ್ಲೂ ಉತ್ತಮ ಸಂಘಟನೆ ಹೊಂದಿರುವುದಾಗಿ ಹೇಳಿಕೊಳ್ಳುವ ಬಿಜೆಪಿ ಸದ್ಯದ ಮಟ್ಟಿಗೆ ಧ್ವನಿ ಕಳೆದುಕೊಂಡAತೆ ಮೌನವಾಗಿಬಿಟ್ಟಿದೆ.

ಈ ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಜಿಲ್ಲಾ ಬಿಜೆಪಿಯಲ್ಲೂ ಸಣ್ಣ ಮಟ್ಟದಲ್ಲಿ ಸಂಚಲನ ಶುರುವಾಗಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತಿದ್ದಂತೆಯೇ ಸಹಜವಾಗಿ ಜಿಲಾಧ್ಯಕ್ಷರಾದಿಯಾಗಿ ಪಕ್ಷದ ಪದಾಧಿಕಾರಿಗಳಾಗಿ ಬೇರೆಯವರನ್ನು ನೇಮಿಸಲಾಗುತ್ತದೆ. ನೂತನ ನಾಯಕ ತನ್ನ ಜತೆ ಕೆಲಸ ಮಾಡಲು ಸೂಕ್ತ ಅನ್ನಿಸುವ ವ್ಯಕ್ತಿಗಳನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಹಾಗಾಗಿಯೇ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ವಿವಿಧ ಮಾನದಂಡಗಳ ಆಧಾರದಲ್ಲಿ ಹಲವರು ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ಶುರು ಮಾಡಿದ್ದಾರೆ.

ಕೊಡವ ಸಮುದಾಯಕ್ಕೆ ಸೇರಿದ ಪಳೆಯಂಡ ರಾಬಿನ್ ದೇವಯ್ಯ ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಗೌಡ ಸಮುದಾಯಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಅವಕಾಶ ಕೊಡಬೇಕು ಎನ್ನುವ ಕೂಗು ಪಕ್ಷದೊಳಗೆ ಕೇಳಿಬರುತ್ತಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲೂ ಹೆಚ್ಚು ಮಂದಿ ಗೌಡ ಸಮುದಾಯದವರೇ ಇದ್ದಾರೆ. ಇದನ್ನು ಹೊರತುಪಡಿಸಿ ಬೇರೆ ರೀತಿಯ ಲೆಕ್ಕಾಚಾರಗಳೂ ಪಕ್ಷದೊಳಗೆ ನಡೆದಿದೆ. ಈ ಹಿಂದೆ ಹಲವಾರು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಈ ಸಲ ನ್ಯಾಯ ಸಲ್ಲಿಸಬೇಕು ಎಂದು ಬೇಡಿಕೆ ಇಡುತ್ತಿರುವವರೂ ಇದ್ದಾರೆ.

ಹೊಸ ಮುಖಗಳಿಗೆ ಅವಕಾಶ ಕೊಡಬೇಕು ಎನ್ನುವ ಇಂಗಿತ ಸಂಘ ಪರಿವಾರ ಮತ್ತು ಕಾರ್ಯಕರ್ತರಿಂದ ವ್ಯಕ್ತವಾಗುತ್ತಿದೆ. ಈ ಮಧ್ಯೆ ದೊಡ್ಡ ನಾಯಕರೊಬ್ಬರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಪಕ್ಷದೊಳಗೆ ಕೇಳಿಬರುತ್ತಿದೆ. ಆದರೆ ಇದಕ್ಕೆ ವಿರೋಧವೂ ಕಂಡು ಬಂದಿದೆ. ಯಾವುದೇ ಕಾರಣಕ್ಕೂ ಅಧಿಕಾರ ಅನುಭವಿಸಿದವರಿಗೆ ಮತ್ತೆ ಮತ್ತೆ ಅಧಿಕಾರ ಕೊಡಬಾರದು ಎನ್ನುವುದು ಕಾರ್ಯಕರ್ತರ ಅಭಿಪ್ರಾಯ. ಮತ್ತೊಂದು ಕಡೆ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೋರ್ವರೂ ಮತ್ತೆ ತಮಗೆ ಜಿಲ್ಲಾಧ್ಯಕ್ಷಸ್ಥಾನ ಬೇಕು ಎನ್ನುವ ಆಕಾಂಕ್ಷೆ ವ್ಯಕ್ತಪಡಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.

ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿದ್ದ ವೀರಶೈವ ಸಮುದಾಯದ ಕೆಲವು ಮುಖಂಡರು ವಿಜಯೇಂದ್ರ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮತ್ತೆ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದು ಈ ಸಮುದಾಯದ ಪ್ರಮುಖರೊಬ್ಬರು ಕೂಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಸಂಘ ಪರಿವಾರವೂ ಬಲಿಷ್ಠವಾಗಿದ್ದು ಯಾರು ಎಷ್ಟೇ ಪ್ರಯತ್ನಿಸಿದರೂ ಸಂಘ ಪರಿವಾರದ ಕೃಪಕೃಟಾಕ್ಷ ಇಲ್ಲದಿದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹಾಗಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಂಘ ಪರಿವಾರದ ಪ್ರಮುಖರ ಮೊರೆ ಹೋಗಿದ್ದಾರೆ. ಜಾತಿ ಲೆಕ್ಕಾಚಾರವೂ ಮಹತ್ವದ ಪಾತ್ರ ವಹಿಸುವುದರಿಂದ ಮುಂದೆ ಜಿಲ್ಲಾ ಬಿಜೆಪಿ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆ ಕಳೆದ ನಂತರ ಕೊಡಗು ಬಿಜೆಪಿಯಲ್ಲೂ ಒಂದು ರೀತಿಯ ಮೋಡ ಕವಿದ ವಾತಾವರಣ ಇತ್ತು. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ನಂತರ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ವಿಜಯೇಂದ್ರ ನೇಮಕ ಜಿಲ್ಲಾ ಬಿಜೆಪಿಯಲ್ಲಿ ಖಂಡಿತ ಬದಲಾವಣೆ ತರುತ್ತದೆ. ಪಕ್ಷದ ಜಿಲ್ಲಾಧ್ಯಕ್ಷರು 3 ವರ್ಷಕ್ಕೆ ಒಮ್ಮೆ ಬದಲಾಗುವುದು ನಮ್ಮ ಸಾಮಾನ್ಯ ಪ್ರಕ್ರಿಯೆ. ಚುನಾವಣೆ ಕಾರಣಕ್ಕೆ ಈಗಿನ ಅಧ್ಯಕ್ಷರ ಅವಧಿ ಒಂದು ವರ್ಷ ವಿಸ್ತರಿಸಲಾಗಿತ್ತು. ಹೊಸದಾಗಿ ಅಧ್ಯಕ್ಷರಾಗಲು ಹಲವು ಆಕಾಂಕ್ಷಿಗಳಿದ್ದಾರೆ. ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.
ಮಹೇಶ್ ಜೈನಿ, ಬಿಜೆಪಿ ಕೊಡಗು ಜಿಲ್ಲಾ ವಕ್ತಾರ

ರಾಜ್ಯಾಧ್ಯಕ್ಷರ ಬದಲಾವಣೆ ಆದಾಗ ಜಿಲ್ಲಾಧ್ಯಕ್ಷರ ಬದಲಾವಣೆ ಸಹಜ ಪ್ರಕ್ರಿಯೆ. ಕೊಡಗಿನಲ್ಲಿ ಬಿಜೆಪಿ ಈಗಲೂ ಬಲಿಷ್ಠವಾಗಿಯೇ ಇದೆ. ಇದನ್ನು ಮುನ್ನಡೆಸಲು ಸಮರ್ಥರು ಕೂಡ ಪಕ್ಷದಲ್ಲಿ ಇದ್ದಾರೆ. ಹೊಸ ನಾಯಕತ್ವಕ್ಕೆ ಅನುಗುಣವಾಗಿ ಹೊಸ ತಂಡವನ್ನು ರಚಿಸುವ ಸಂದರ್ಭ ಅರ್ಹರಿಗೆ ಖಂಡಿತ ಅವಕಾಶ ಸಿಗುತ್ತದೆ. ಮುಂದಿನ ಚುನಾವಣೆಗಳಲ್ಲಿ ನಾವು ಮತ್ತೆ ಹಿಂದಿನ ವೈಭವಕ್ಕೆ ಮರಳುತ್ತೇವೆ.
ಕೆ.ಜಿ. ಮನು, ಬಿಜೆಪಿ ತಾಲೂಕು ವಕ್ತಾರ, ಸೋಮವಾರಪೇಟೆ