ಹುಣಸೂರು: ಜೀವನದಲ್ಲಿ ಬಡತನ, ಒತ್ತಡ ತಾತ್ಕಾಲಿಕ. ಆದರೆ ಪರಿಶ್ರಮದಿಂದ ಮಾಡಿದ ಸಾಧನೆ ಶಾಶ್ವತವಾಗಿ ಉಳಿಯಲಿದೆ ಎನ್ನುವುದನ್ನು ಅರಿಯಬೇಕು ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಆಸ್ಪತ್ರೆಯ ನೂತನ ಪ್ರಯೋಗಾಲಯವನ್ನು ಉದ್ಘಾಟಿಸಿ ಆವರಣದಲ್ಲಿ ಆಯೋಜಿಸಿದ್ದ ನಾಗರಿಕ ಸನ್ಮಾನ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಕಾವೇರಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಆರ್ಥಿಕ ಸಂಕಷ್ಟ, ಒತ್ತಡದ ಬದುಕು ಎಲ್ಲವೂ ಸಹಜವಾಗಿರುತ್ತದೆ. ಅದರಿಂದಾಗಿಯೇ ನಿಮ್ಮ ಶಿಕ್ಷಣ ಮತ್ತು ಸಾಧನೆಗೆ ತಡೆಯಾಗಬಾರದು. ಸಕಾರಾತ್ಮಕ ಚಿಂತನೆಯೊಂದಿಗೆ ಇವೆಲ್ಲವುಗಳ ನಡುವೆಯೇ ಮುನ್ನುಗ್ಗಿರಿ. ಶಿಸ್ತಿನ ಜೀವನ, ಕಠಿಣ ಪರಿಶ್ರಮ, ಶ್ರದ್ಧೆ ಬದುಕಿನಲ್ಲಿ ರೂಪಿಸಿಕೊಳ್ಳಿರೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಈ ಭಾಗದ ಜನರಿಂದ ಗುರುತಿಸಲ್ಪಟ್ಟಿರುವ ಮೇಘಾಲಯ ರಾಜ್ಯಪಾಲ ವಿಜಯಶಂಕರ್ ಈಗಲೂ ತಮ್ಮೂರಿನ ಜನರೊಂದಿಗೆ ಅಷ್ಟೇ ಸರಳ ಸಜ್ಜನಿಕೆಯಿಂದ ಬೆರೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ. ಎರಡು ದಿನಗಳ ಹಿಂದೆ ಆರಂಭಗೊಂಡ ಈ ಸಾಲಿನ ತಂಬಾಕು ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತರು ವಿಜಯಶಂಕರ್ ಅವರನ್ನು ನೆನಪಿಸಿಕೊಳ್ಳುತ್ತಿರುವುದು ಅವರ ಸೇವೆ ಮತ್ತು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಕಾವೇರಿ ಆಸ್ಪತ್ರೆಯ ತಾಲೂಕಿನ ಜನತೆಗೆ ಉತ್ತಮ ಸೇವೆ ನೀಡುತ್ತಿದೆ. ಯಾರೇ ಆಗಲಿ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಲಿ. ನಂತರ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕೇ ಹೊರತು ತಡೆಯೊಡ್ಡುವುದಲ್ಲ. ಪ್ರಸ್ತುತ ದಿನಗಳಲ್ಲಿ ಮೆಡಿಕಲ್ ಮಾಫಿಯಾ ಎಷ್ಟು ಪ್ರಭಾವ ಬೀರುತ್ತಿದೆ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ. ಇಂತಹ ಪರಿಸ್ಥಿತಿಯಲ್ಲೂ ಜನರ ಕೈಗೆಟುಕುವ ರೀತಿಯಲ್ಲಿ ಕಾವೇರಿ ಆಸ್ಪತ್ರೆ ಈ ಭಾಗರ ಜನರಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಅನ್ನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಬದಲಾಗಿ ಗ್ಯಾರಂಟಿಗಳು ದೇಶವನ್ನು ಹಾಳು ಮಾಡುತ್ತವೆ ಅಷ್ಟೆ. ಬಡಜನರ ಸೇವೆಗಾಗಿ ದುಡಿಯುತ್ತಿರುವ ಕಾವೇರಿ ಆಸ್ಪತ್ರೆ ತೆರೆಯದಂತೆ ಕೆಲ ಶಕ್ತಿಗಳು ಪ್ರಯತ್ನಿಸಿದ್ದವು. ಇದೊಂದು ದುರಂತವೇ ಸರಿ. ಕಾವೇರಿ ಆಸ್ಪತ್ರೆ ಈ ಭಾಗದ ಜನರ ಬದುಕಿನ ಆಸರೆಯಾಗಿ ಬೆಳೆಯುತ್ತಿದೆ ಎಂದರು.
ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜಸ್ವಾಮೀಜಿ ಆಶೀವರ್ಚನ ನೀಡಿ, ತನ್ನಲ್ಲಿರುವ ಸಂಪತ್ತಿಗೆ ಸನ್ಮಾರ್ಗ ತೋರುವ ದಾರಿಯಲ್ಲಿ ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ.ಲೋಹಿತ್ ಮಾಡುತ್ತಿದ್ದಾರೆ. ಸಂಪತ್ತಿನ ಮೂಲಕ ಸಂಬಂಧಗಳನ್ನು ಬೆಸೆಯುವ ಕಾರ್ಯ ನಡೆಸಿರುವುದು ಸ್ವಾಗತಾರ್ಹ. ತಮ್ಮ 4 ದಶಕಗಳ ಕಾಲದ ರಾಜಕೀಯ ಜೀವನದಲ್ಲಿ ಸರಳತೆಯೇ ಮೈವೆತ್ತಂತೆ ರಾಜಕಾರಣ ಮಾಡಿ ಇದೀಗ ರಾಜ್ಯಪಾಲರಾಗಿರುವ ವಿಜಯಶಂಕರ್ ಭೂಮಿತೂಕದ ಸಾಧಕರಾಗಿ ನಮ್ಮ ಮುಂದಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.
ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಕೀಳರಿಮೆಯನ್ನು ತೊರೆದು ಸಾಧನೆಯತ್ತ ಮುಂದಡಿಯಿಡಬೇಕು. ಸಾಧನೆಗೆ ಬಡತನ ಕಾರಣವಾಗಬಾರದು. ಹುಟ್ಟುವಾಗ ಬಡವನಾಗಿದ್ದರೂ ಸಾಯುವಾಗ ಶ್ರೀಮಂತಿಕೆಯಿಂದಲೇ ಸಾಯಬೇಕು ಎನ್ನುವ ಅಂಬೇಡ್ಕರ್ ಮಾತು ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಮಂಜುನಾಥ್ ಪ್ರಧಾನ ಭಾಷಣ ಮಾಡಿದರು. ಆಸ್ಪತ್ರೆ ಮುಖ್ಯಸ್ಥ ಡಾ.ಲೋಹಿತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಅರಸು ಪುತ್ಥಳಿಯಿಂದ ಕಾವೇರಿ ಆಸ್ಪತ್ರೆಯವರೆಗೆ ರಾಜ್ಯಪಾಲರು ಗಣ್ಯರೊಂದಿಗೆ ಮೆರವಣಿಗೆ ಮೂಲಕ ಬಂದರು. ಕಾವೇರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಯೋಗಾಲಯವನ್ನು ರಾಜ್ಯಪಾಲರು ಸೇವೆಗೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ಶರವಣ ಮಾತನಾಡಿದರು. ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್‌ಕುಮಾರಸ್ವಾಮಿ, ಸತೀಶ್‌ಕುಮಾರ್, ದೇವರಾಜ್, ಮುಖಂಡರಾದ ಬಸವಲಿಂಗಯ್ಯ, ರಂಜಿತಾ ಚಿಕ್ಕಮಾದು, ವೆಂಕಟರಮಣ ಇತರರು ಹಾಜರಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಈ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಸೀಟ್ ಗಳಿಸಿಕೊಂಡ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಳಂಕ ತರುವುದಿಲ್ಲ: ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮಾತನಾಡಿ, ಹುಣಸೂರಿನ ನೆಲದ ಮಗನಾಗಿ ಇದೀಗ ಎತ್ತರ ಸ್ಥಾನದಲ್ಲಿ ಕುಳಿತಿದ್ದೇನೆ. ರಾಜ್ಯಪಾಲನಾಗಿ ಕರ್ತವ್ಯ ನಿರ್ವಹಿಸುವ ಅಂತಿಮ ಕ್ಷಣದವರೆಗೂ ಹುಣಸೂರಿಗೆ, ಹುಣಸೂರಿನ ಜನರಿಗೆ ಕಳಂಕ ಬಾರದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಎಂದಿಗೂ ಭ್ರಷ್ಟಾಚಾರಿಯಾಗಿಲ್ಲ. ಈಗಲೂ ಆಗುವುದಿಲ್ಲ. ಅಭಿವೃದ್ಧಿಪರ ಆಡಳಿತ ನೀಡುವುದೊಂದೇ ನನ್ನ ಗುರಿಯಾಗಿದೆ ಎಂದರು.
30 ಬೆಡ್ 300 ಬೆಡ್ ಆಗಲಿದೆ: ನಾನು ಒಬ್ಬ ಗುಡ್ಡಪ್ಪ, ನನ್ನ ಮಾತು ಕೇಳಿ ಡಾಕ್ಟ್ರೇ..ಇದೀಗ ನಿಮ್ಮ ಆಸ್ಪತ್ರೆ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದೆ. ಮುಂದಿನ 2-3 ವರ್ಷಗಳಲ್ಲಿ ಇದು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಲಿದೆ. ನನ್ನ ಮಾತಿನಲ್ಲಿ ಸತ್ಯವಿದೆ. ನಿಮ್ಮ ಸೇವೆಗೆ ಜನರ ಆಶೀರ್ವಾದ ಸಿಗಲಿದೆ. ನಿಮಗೂ ನಿಮ್ಮ ಕುಟುಂಬಕ್ಕೂ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ರಾಜ್ಯಪಾಲ ತಮ್ಮ ಭಾಷಣದಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ಲೋಹಿತ್‌ರನ್ನು ಕುರಿತು ಹೇಳಿ ಪ್ರಶಂಸಿಸಿದರು.