ಮೋವಾಡಿ: ಹಕ್ಕುಪತ್ರ, ನಿವೇಶನ ವಿಂಗಡಿಸಿ ನೀಡದಿರುವುದನ್ನು ವಿರೋಧಿಸಿ ತ್ರಾಸಿ ಗ್ರಾಪಂ ವ್ಯಾಪ್ತಿಯ ಮೋವಾಡಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರು ತಮಗೆ ಮಂಜೂರಾದ ಜಾಗದಲ್ಲಿ ಗುಡಿಸಲು ಕಟ್ಟಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಣ ಬಂದರೂ ಸೈಟ್ ವಿಂಗಡಿಸದೆ ಇರುವುದರಿಂದ ಮನೆ ಕಟ್ಟಲು ಆಗುತ್ತಿಲ್ಲ. ತಕ್ಷಣ ನಿವೇಶನ ವಿಂಗಡಿಸಿ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸೈಟ್ ಮಂಜೂರು ಮಾಡಿಕೊಂಡಿದ್ದರೂ ಮನೆ ಕಟ್ಟಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಮೋವಾಡಿಯ ಎಸ್ಸಿ, ಎಸ್ಟಿ ಜನಾಂಗದವರಿದ್ದಾರೆ. ಜಿಲ್ಲಾಡಳಿತ ನೆರವಿಗೆ ಬಂದು, ನಿವೇಶನ ವಿಂಗಡಿಸಿ, ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ 50 ಕುಟುಂಬಗಳು ತಮಗೆ ಮಂಜೂರಾದ ಜಾಗದಲ್ಲಿ ಗುಡಿಸಲು ಕಟ್ಟಿ ವಾಸ್ತವ್ಯ ಮಾಡಿ ಪ್ರತಿಭಟನೆ ನಡೆಸಿದರು.
ನಾಲ್ಕು ವರ್ಷದ ಹಿಂದೆ ಸರ್ಕಾರಿ ಜಾಗದಲ್ಲಿ ಟೆಂಟ್ ಹಾಕಿ ಕೂತಿದ್ದು, ಅಂದಿನ ಡಿಸಿ ಡಾ.ವಿಶಾಲ್ ಆರು ಎಕರೆ ಜಾಗ ಮಂಜೂರು ಮಾಡಿದ್ದರು ಎಂದು ಭೂಮಿ ಹೋರಾಟ ಸಮಿತಿ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದರು. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಡಿಸಿ ಆಗಿದ್ದಾಗ ತಾಂತ್ರಿಕ ಪ್ರಕ್ರಿಯೆ ತ್ವರಿತ ಮಾಡಿ, ಪ್ರತಿಯೊಬ್ಬರಿಗೂ 4.75 ಸೆಂಟ್ಸ್‌ನಂತೆ 50 ಕುಟುಂಬಕ್ಕೆ ನೀಡಿದ್ದು, 14 ಜನರಿಗೆ ಮಾತ್ರ ಹಕ್ಕುಪತ್ರ ಸಿಕ್ಕಿದೆ. ಪ್ರತಿ ಮನೆಗೆ 3.80 ಲಕ್ಷ ರೂ. ಅನುದಾನ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಆರು ತಿಂಗಳ ಹಿಂದೆ ಬಂದಿದ್ದರೂ ಸೈಟ್ ವಿಂಗಡಿಸದೆ ಇರುವುದರಿಂದ ಮನೆ ನಿರ್ಮಿಸಲು ಆಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಧ್ವನಿಯಾದ ವಿಜಯವಾಣಿ: ಮೋವಾಡಿ ಮೂಲನಿವಾಸಿಗಳ ವಾಸ್ತವ್ಯ ಸಂಕಷ್ಟದ ಬಗ್ಗೆ ವಿಜಯವಾಣಿ ವರದಿ ಮಾಡಿತ್ತು. ಮೋವಾಡಿಯಲ್ಲಿ ಎಸ್‌ಸಿ, ಎಸ್‌ಟಿ ಕುಟುಂಬದವರ ಹೋರಾಟದ ಬಗ್ಗೆ ಬೆಳಕು ಚೆಲ್ಲಿದ್ದರಿಂದ ಡಿಸಿ, ತಹಸೀಲ್ದಾರ್, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಸರ್ವೇ ನಂಬರ್ 121ಎ ಪಿ1ರಲ್ಲಿ ಆರು ಎಕರೆ ಜಾಗ ನಿವೇಶನಕ್ಕೆ ಮೀಸಲಿಟ್ಟು, 50 ಕುಟುಂಬಕ್ಕೆ ನೀಡುವ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದ್ದು, 50 ಜನರಲ್ಲಿ 28 ಜನರಿಗೆ ಸೈಟ್ ಮಂಜೂರಾಗಿದ್ದು, 14 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ.
ನಾವು ಕೂಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ಇದ್ದೇವೆ. ಆರು ತಿಂಗಳಿಂದ ಮನೆ ಬಾಡಿಗೆ ಕೊಡದಿದ್ದರಿಂದ ಮನೆ ಖಾಲಿ ಮಾಡಲು ಮಾಲೀಕರು ಸೂಚಿಸಿದ್ದಾರೆ. ನಮಗೆ ನಿವೇಶನ ಮಂಜೂರಾಗಿದ್ದು, ಸೈಟ್ ವಿಂಗಡಿಸಿ ಕೊಡದಿದ್ದರಿಂದ ಮನೆ ಕಟ್ಟಲು ಆಗುತ್ತಿಲ್ಲ. ಅಂಬುಜಾಕ್ಷಿ ಮೋವಾಡಿ ಮೂಲನಿವಾಸಿಗಳ ಹಕ್ಕುಪತ್ರ, ಮನೆ ನಿವೇಶನ ವಿಂಗಡಣೆ, ತಾಂತ್ರಿಕ ಸಮಸ್ಯೆ ಬಗ್ಗೆ ತಹಸೀಲ್ದಾರ್ ಜತೆ ಚರ್ಚಿಸಿ, ಸಮಸ್ಯೆ ಇದ್ದರೆ ಪರಿಹಾರ ಮಾಡಿ ಫಲಾನುಭವಿಗಳಿಗೆ ನಿವೇಶನ ವಿಂಗಡಿಸಿಕೊಡಲಾಗುವುದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನೀಡುವ ಪ್ರಯತ್ನ ಮಾಡಲಾಗುತ್ತದೆ. ಹಕ್ಕುಪತ್ರ ಪ್ರಕ್ರಿಯೆ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆ.ರಾಜು ಕುಂದಾಪುರ ಉಪವಿಭಾಗಾಧಿಕಾರಿ