ಜಿಲ್ಲೆ

ಮಲೆನಾಡಂತಾದ ಮೈಸೂರು!

reportermys


ಮೈಸೂರು: ‘ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ…’ ಜಿ.ಪಿ.ರಾಜರತ್ನಂ ಅವರ ಕವಿತೆಯ ಈ ಸಾಲು ಶುಕ್ರವಾರ ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರಶಃ ನಿಜವಾಯಿತು.


ರಾಜರತ್ನಂ ಅವರು ಮಡಿಕೇರಿಯ ಮಂಜನ್ನು ಹೀಗೆ ವರ್ಣಿಸಿದ್ದರು. ಅದೇ ಮಾದರಿಯಲ್ಲಿ ಮೈಸೂರು ನಗರದ ತುಂಬ ದಟ್ಟ ಮಂಜು ಆವರಿಸಿತ್ತು. ಮೈಸೂರಿನಲ್ಲಿ ಮಂಜು ಮಾತ್ರ ಇರಲಿಲ್ಲ, ಮಂಜಿನ ಜತೆಗೆ ಮಳೆಯೂ ಇತ್ತು.
ನಗರದಲ್ಲಿ ಬೆಳಗ್ಗೆ ಎಂದಿನಂತೆ ಚಳಿಯ ವಾತಾವರಣವಿದ್ದರೂ ಅಷ್ಟಾಗಿ ಮಂಜು ಕವಿದಿರಲಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣ ಕಂಡು ಬಂತು. ಮಧ್ಯಾಹ್ನ 12 ಗಂಟೆಯಲ್ಲಿ ಸ್ವಲ್ಪ ಸೋನೆಯೊಂದಿಗೆ ಮಳೆ ಆರಂಭವಾಗಿ ಕೆಲ ಕಾಲ ಸುರಿಯಿತು.

ಮಳೆ ನಿಂತ ಬಳಿಕ ನಗರದಲ್ಲಿ ಮಂಜು ಕವಿಯಲು ಶುರುವಾಯಿತು. ಮಧ್ಯಾಹ್ನದ ನಂತರ ಆವರಿಸಿದ್ದ ಮಂಜಿನಿಂದಾಗಿ ನಗರದ ಚಾಮುಂಡಿ ಬೆಟ್ಟದ ಕಡೆಯ ಭಾಗದ ಕೆಲ ರಸ್ತೆಗಳೇ ಗೋಚರಿಸಲಿಲ್ಲ.
ಮಧ್ಯಾಹ್ನ 12.30 ಗಂಟೆಯಿಂದ ನಿರಂತರವಾಗಿ ಮಂಜಿನ ವಾತಾವರಣ ಮೂಡಿದ್ದು, ಸಂಜೆವರೆಗೂ ಇಳಿಯಲಿಲ್ಲ. ಸತತ 4 ಗಂಟೆಗೂ ಅಧಿಕ ಕಾಲ ಈ ರೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈ ಮಧ್ಯೆ ಸಣ್ಣ ಸಣ್ಣ ಹನಿಯೊಂದಿಗೆ ಮಳೆ ಸುರಿದು ಮೈಸೂರು ಒಮ್ಮೆಲೆ ಊಟಿಯಂತೆ ಭಾಸವಾಯಿತು.