ಜಿಲ್ಲೆ

ಮನೋಜ್ಞ ಅಭಿನಯದ ಮೂಲಕ ‘ಗರ್ಭ’ ನಾಟಕ ಪ್ರದರ್ಶಿಸಿದ ಮೌಂಟ್ ಕಾರ್ಮೆಲ್ ಕನ್ನಡತಿಯರು

ಎನ್.ಎಲ್. ಶಿವಮಾದು

ಬೆಂಗಳೂರು ಮನೆ ಭಾಷೆ, ಕಲಿಯುವ ಭಾಷೆ, ಸ್ನೇಹಿತರು-ಕಾಲೇಜಿನಲ್ಲಿನ ದಿನನಿತ್ಯದ ಭಾಷೆ ಇಂಗ್ಲಿಷ್. ಬೆಳಗ್ಗೆಯಿಂದ ಸಂಜೆಯವರೆಗೂ ಇಂಗ್ಲಿಷ್ ವಾತಾವರಣದಲ್ಲಿಯೇ ಇರುವ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ‘ಗರ್ಭ’ ಎಂಬ ಕನ್ನಡ ನಾಟಕವನ್ನು ತುಂಬಾ ಮನೋಜ್ಞವಾಗಿ ಮತ್ತು ಭಾವನಾತ್ಮಕವಾಗಿ ಆಭಿನಯಿಸಿದರು.

ರಂಗ ಚಂದಿರ ಮತ್ತು ಸಮೃದ್ಧಿ ರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಗುರುವಾರ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ರಂಗಪತಾಕೆ-2023ರ ಅಡಿ ನಾಟಕ ಪ್ರದರ್ಶಿಸಲಾಯಿತು.

‘ಸರೋಗಸಿ’ ವಿಧಾನದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುವ ಕತೆಯುಳ್ಳ ’ಗರ್ಭ’ವನ್ನು ಅಲ್ಲಿನ ಪಾತ್ರಧಾರಿಗಳಾಗಿ ತಲ್ಲೀನರಾಗಿದ್ದರು. ಹಳ್ಳಿಗಾಡಿನ ಮುಗ್ಧ, ಅನಕ್ಷರಸ್ಥ ಮಹಿಳೆಯಾಗಿ ತಾಯಿ ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರವಲ್ಲ, ಇಡೀ ನಾಟಕದ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮಟ್ಟಿಗೆ ತಮ್ಮ ತನ್ನೊಳಗಿನ ಕಲಾವಿದೆಯನ್ನು ಪ್ರದರ್ಶಿಸಿದರು. ಇಲ್ಲಿ ಎಲ್ಲಿಯೂ ಮೌಂಟ್ ಕಾಲೇಜಿನ ವಿದ್ಯಾರ್ಥಿನಿ ಎಂಬುದು ಯಾರೂ ಕೂಡ ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಮಟ್ಟಿಗೆ ಅಭಿನಯಿಸಿ ಅಭಿಕರಿಂದ ಬೆನ್ನು ತಟ್ಟಿಸಕೊಂಡರು.

ಒಂದು ಗಂಟೆ ಹತ್ತು ನಿಮಿಷಗಳ ಅವಧಿಯ ನಾಟಕದಲ್ಲಿ ಕನ್ನಡ ಪದಗಳ ಬಳಕೆ, ಉಚ್ಚಾರಣೆಗಳಲ್ಲಿನ ಅಭಾಸವಾಗುವಂತೆ ಎಲ್ಲಿಯೂ ಕಂಡುಬಾರದಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತು.

ನಾಟಕದ ರಚನೆ-ನಿರ್ದೇಶನ ಹೊಣೆಯನ್ನುವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಬೇಲೂರು ರಘುನಂದನ್ ಹೊತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯವಾಣಿ ಸಂಪಾದಕ ಕೆ.ಎನ್. ಚೆನ್ನೇಗೌಡ ಅವರು, ಭಾರತೀಯ ಸಂಸ್ಕೃತಿ ಮತ್ತು ಕನ್ನಡತನ ನಶಿಸಿ ಹೋಗುತ್ತಿವೆ ಎಂಬ ಕೂಗಿನ ನಡುವೆ ಎಲ್ಲೆಡೆ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ರಂಗಭೂಮಿ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ರಂಗಭೂಮಿಯಲ್ಲಿ ಮಕ್ಕಳು ತೊಡಗಿಸಿಕೊಂಡಾಗ ವೇದಿಕೆಯಲ್ಲಿ ನಿಂತು ಮಾತನಾಡುವ ಭಯ ತೊಲಗಲಿದೆ. ನಿರರ್ಗಳವಾಗಿ ಮಾತನಾಡುವ ಧೈರ್ಯ ಬರಲಿದೆ. ಎಂತಹುದೇ ಸಂದರ್ಭವನ್ನು ಎದುರಿಸುವ ಮನಸ್ಥಿತಿ ಮತ್ತು ಜೀವನ ಪಾಠವನ್ನು ರಂಗಭೂಯಿ ಕಲಿಸಲಿದೆ ಎಂದು ತಿಳಿಸಿದರು.

ಪ್ರತಿ ವರ್ಷ ವಿಜಯವಾಣಿ ವತಿಯಿಂದ ಮೈಸೂರಿನಲ್ಲಿ ಕೃಷಿ ಮೇಳ ನಡೆಸಲಾಗುತ್ತದೆ. ಮೌಂಟ್ ಕಾರ್ಮೆಲ್ ಕಾಲೇಜು ಅನುಮತಿ ನೀಡಿದರೆ, ಈ ಬಾರಿಯ ಮೇಳದಲ್ಲಿ ಇದೇ ತಂಡದ ನಾಟಕವನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಆದಾಯ ತೆರಿಗೆ ಇಲಾಖೆಯು ನಿವೃತ್ತ ಇನ್‌ಸೆಕ್ಟರ್‌ಗಳಾದ ರೇವಣ್ಣ ಸಿದ್ಧಯ್ಯ ಮತ್ತ ವೀರಣ್ಣ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನ ನಿರ್ದೇಶಕಿ ಸಿಸ್ಟರ್ ಅಲ್ಬಿನಾ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರವಿ ಎಚ್.ವಿ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ, ಜಿಪಿಒ ಚಂದ್ರು, ಲಯನ್ಸ್ ಕ್ಲಬ್‌ನ ಶೋಭಾ ಉಪಸ್ಥಿತರಿದ್ದರು.

ಕಲಾವಿದರು, ನಾಟಕ ಎಂಬುದು ‘ಕೇವಲ’ ಎಂಬ ಮನಸ್ಥಿತಿಯಿಂದ ಜನರು ಹೊರಗೆ ಬರಬೇಕು. ಮೌಂಟ್ ಕಾರ್ಮೆಲ್ ಕಾಲೇಜಿನಿಂದ 40 ವಿದ್ಯಾರ್ಥಿಗಳು ರಂಗಭೂಮಿಗೆ ಬಂದಿದ್ದಾರೆ. ಪ್ರತಿ ವರ್ಷ ನಾನು ಕಾಲೇಜುಗಳಿಂದ ಕನಿಷ್ಠ 100 ವಿದ್ಯಾರ್ಥಿಗಳನ್ನು ರಂಗಭೂಮಿಗೆ ತರುವ ಉದ್ದೇಶ ಹೊಂದಿದ್ದೇನೆ. - ಡಾ. ಬೇಲೂರು ರಘನಂದನ್, ನಿರ್ದೇಶಕ