ನೂರಾರು ವರ್ಷಗಳ ಇತಿಹಾಸವಿರುವ ಗ್ರಾಮ
ಮಾವು, ತೆಂಗು, ಹೈನುಗಾರಿಕೆಯೇ ಜೀವನಾಧಾರ
* ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸುತ್ತಲೂ ಮಾವು, ತೆಂಗಿನ ಮರಗಳ ಹಸಿರು ಹೊದ್ದು, ಸಹಬಾಳ್ವೆಗೆ ಸಾಕ್ಷಿಯಾಗಿದೆ ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಮೊಟ್ಟೆದೊಡ್ಡಿ ಗ್ರಾಮ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೊಟ್ಟೆದೊಡ್ಡಿ ಅರ್ಕಾವತಿ ನದಿದಂಡೆ ಮೇಲೆ ಕನಕಪುರ-ರಾಮನಗರ ರಾಜ್ಯ ಹೆದ್ದಾರಿ ಸಮೀಪ, ಅಚ್ಚಲು ಬೆಟ್ಟಗಳ ಪಕ್ಕದಲ್ಲಿ ಹರಡಿದೆ. ತೆಂಗಿನಗರಿ ಶೆಡ್‌ಗಳಿಂದ ನಿರ್ಮಾಣವಾದ ಗ್ರಾಮವೀಗ ಅಭಿವೃದ್ಧಿಯತ್ತ ಸಾಗಿದೆ.
ರಾಮನಗರ ಜಿಲ್ಲಾ ಕೇಂದ್ರದಿಂದ 7 ಕಿಮೀ ಅಂತರದಲ್ಲಿರುವ ಮೊಟ್ಟೆದೊಡ್ಡಿ, ಕನಕಪುರ-ರಾಮನಗರ ಹೆದ್ದಾರಿ ಮತ್ತು ಬನ್ನಿಕುಪ್ಪೆ-ಲಕ್ಕಪ್ಪನಹಳ್ಳಿ ಮಾರ್ಗದ ರಸ್ತೆಗಳಿಂದ ಉತ್ತಮ ಸಾರಿಗೆ ಸಂಪರ್ಕವಿದೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಹುಟ್ಟೂರು ಲಕ್ಕಪ್ಪನಹಳ್ಳಿ ಪಕ್ಕದಲ್ಲೇ ಈ ಗ್ರಾಮವಿದೆ.
ಮೊದಲು ಮಣ್ಣಿನ ಬೀದಿ ರಸ್ತೆ, ನಾಡಹೆಂಚಿನ ಮಣ್ಣಿನ ಗೋಡೆಗಳಿಂದ ಕೂಡಿದ ಮನೆಗಳು ಈಗ ಕಾಂಕ್ರೀಟ್ ಮನೆಗಳು ಹಾಗೂ ಬೀದಿ ರಸ್ತೆಗಳಲ್ಲಿ ಸಿಮೆಂಟ್, ವೈಜ್ಞಾನಿಕ ಚರಂಡಿ ನಿರ್ಮಾಣವಾಗಿವೆ. ಅರ್ಕಾವತಿ ನದಿಯು ಗ್ರಾಮದ ಕೆಳ ಭಾಗವಿದ್ದರೂ ಗ್ರಾಮ ಎತ್ತರದಲ್ಲಿರುವ ಕಾರಣ ನದಿ ಅಕ್ಕಪಕ್ಕದ ಜಮೀನಿಗಷ್ಟೇ ನೀರಾವರಿ ಸೌಲಭ್ಯ ಇದೆ. ಮಿಕ್ಕೆಲ್ಲ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚಾಗಿದ್ದು, ಮಾವು, ರೇಷ್ಮೆ, ತೆಂಗು ಗ್ರಾಮದ ರೈತರ ವಾಣಿಜ್ಯ ಬೆಳೆ. ಭತ್ತ, ರಾಗಿ ಪ್ರಮುಖ ಬೆಳೆಗಳಾಗಿವೆ.
ಗ್ರಾಮದಲ್ಲಿ 1,300ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, 550 ಮಂದಿ ಮತದಾರರಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ, ಹಾಲಿನ ಡೇರಿ ಇದೆ. ಮಾವು ಬೆಳೆ ಹೆಚ್ಚಿರುವ ಪ್ರದೇಶವಾಗಿರುವ ಕಾರಣ ಹೆಚ್ಚಿನ ರೈತರು ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಜತೆಗೆ ಗ್ರಾಮದಲ್ಲಿ ಹಾಲಿನ ಡೇರಿ ಇದ್ದು, ಜನರ ಜೀವನಾಧಾರಕ್ಕೆ ಹೈನುಗಾರಿಕೆ ಬೆನ್ನೆಲುಬಾಗಿದೆ.
ಗ್ರಾಮದಲ್ಲಿ ಕೋಟೆ ಮಾರಮ್ಮ, ಶ್ರೀನಿವಾಸ, ಮಲೈ ಮಹದೇಶ್ವರ ದೇವಾಲಯಗಳಿದ್ದು, 5 ವರ್ಷಕ್ಕೊಮ್ಮೆ ಕೋಟೆ ಮಾರಮ್ಮ ಅಗ್ನಿಕೊಂಡ ಹಾಗೂ ಪ್ರತಿ ವರ್ಷ ವೈಕುಂಠ ಏಕಾದಶಿಯಲ್ಲಿ ಶ್ರೀನಿವಾಸ ಕಲ್ಯಾಣ, ದೀಪಾವಳಿ, ಶಿವರಾತ್ರಿಯಲ್ಲಿ ಮಲೈ ಮಹದೇಶ್ವರ ಕೊಂಡೋತ್ಸವ ನಡೆಯುತ್ತದೆ.
ಗ್ರಾಮದ ಜನರು ಮೊದಲು ಚನ್ನಪಟ್ಟಣ ತಾಲೂಕಿನ ಅಬ್ಬೂರು, ತಿಟ್ಟಮಾರನಹಳ್ಳಿ, ಕುಕ್ಕೂರುದೊಡ್ಡಿ ಸೇರಿ ಇತರ ಕಡೆಗಳಿಂದ ವಲಸೆ ಬಂದು ಮೊಟ್ಟೆದೊಡ್ಡಿ ಗ್ರಾಮದಲ್ಲಿ ಬಂದು ನೆಲೆನಿಂತಿದ್ದಾರೆ. ಹಿಂದೆ ಗ್ರಾಮವನ್ನು ಹಳೇದೊಡ್ಡಿ ಎಂದು ಕರೆಯಲಾಗುತ್ತಿದ್ದು, ನಂತರ ಗ್ರಾಮದಲ್ಲಿ ಹೆಂಚಿನ ಮನೆಗಳಿಲ್ಲದೆ ತೆಂಗಿನಗರಿಯ ಮನೆಗಳಿದ್ದ ಕಾರಣ ಮೊಟ್ಟೆದೊಡ್ಡಿ ಎಂದು ಹೆಸರು ಬಂದಿದ್ದು, ಇಂದಿಗೂ ಅದೇ ಹೆಸರು ಬಳಕೆಯಲ್ಲಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಗ್ರಾಮದಲ್ಲಿ ರೈತಾಪಿ ಕುಟುಂಬಗಳೇ ಹೆಚ್ಚಿವೆ. ಅರ್ಕಾವತಿ ನದಿ ದಂಡೆಯಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಾವರಿ ಪ್ರದೇಶ ವಿಸ್ತರಣೆ ಆಗಿದ್ದು, ಉಳಿದಂತೆ ಬೋರ್‌ವೆಲ್ ನೀರಿನಿಂದ ತೆಂಗು, ಜಾನುವಾರು ಮೇವು, ರೇಷ್ಮೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಂತೆ ಅಚ್ಚಲು ಅರಣ್ಯದ ಕೆರೆ, ಗ್ರಾಮದ ಪಕ್ಕವೇ ಕಾಡೇಗೌಡನಕಟ್ಟೆ ಕೆರೆಗಳಿದ್ದು ಅಂತರ್ಜಲಮಟ್ಟ ಹೆಚ್ಚಿಸಿ, ನೀರಿನ ಕೊರತೆ ನೀಗಿಸಿವೆ.
ಮೊಟ್ಟೆದೊಡ್ಡಿ ಹೆಚ್ಚಾಗಿ ಮಾವು ಬೆಳೆಯುವ ಗ್ರಾಮವಾಗಿದ್ದು, ಗ್ರಾಮದ ಬಹುಪಾಲು ರೈತರು ಮಾವು ವ್ಯಾಪಾರದಲ್ಲಿ ಮುಂದಡಿ ಇಟ್ಟಿದ್ದಾರೆ. ತೋಟಗಳ ತೆಗೆ ಸುತ್ತಮುತ್ತಲ ಗ್ರಾಮಗಳ ರೈತರ ಮಾವಿನ ತೋಟಗಳನ್ನೂ ಗುತ್ತಿಗೆ ಪಡೆದು ಮಾವು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ಬೆಳ್ಳಿ, ತಾಮ್ರ, ಹಿತ್ತಾಳೆಯಲ್ಲಿ ಪುರಾತನ ಕಾಲದಿಂದಲೂ ಮೂರು ವಿಶ್ವಕರ್ಮ ಕುಟುಂಬಗಳು ವಿಗ್ರಹ ಕೆತ್ತನೆಯಲ್ಲಿ ಈಗಲೂ ನಿರತವಾಗಿವೆ. ಗ್ರಾಮದ ಶ್ರೀನಿವಾಸ ದೇವರಿಗೆ ಮೂಲ ಪ್ರಭಾಳೆಯನ್ನು ಹಿಂದೆ ಗ್ರಾಮದ ರುದ್ರಾಚಾರ್ ಅವರು ಕೆತ್ತನೆ ಮಾಡಿದ್ದರು ಎಂದು ಹೇಳುತ್ತಾರೆ.
ಗ್ರಾಮದಲ್ಲಿ ಹೆಚ್ಚಾಗಿ ರೈತಾಪಿ ವರ್ಗದವರಿದ್ದು, ಉಪ ಕಸುಬಾಗಿ ಹಸು, ಕುರಿ, ಮೇಕೆ ಸಾಕಣೆ ಅಲ್ಲದೆ ಮೂರ‌್ನಾಲ್ಕು ಕುಟುಂಬಗಳು ಹಂದಿಗಳನ್ನೂ ಸಾಕಿದ್ದಾರೆ. ಒಬ್ಬೊಬ್ಬರು 100ಕ್ಕೂ ಹೆಚ್ಚು ಹಂದಿ ಸಾಕಿ, ಕೃಷಿ ತೆಗೆ ಉಪ ಕಸುಬಿನಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.