ಭಾಲ್ಕಿ: ವಿದ್ಯಾರ್ಥಿ ಜೀವನದ ಯಶಸ್ಸಿಗೆ ತಮ್ಮದೇ ಆದ ವಿಜನ್ ಹೊಂದುವುದರ ಜತೆಗೆ ಪೂರಕ ಪ್ರಯತ್ನ ಮಾಡಿದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಇಲಾಖೆ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸಕುಪ್ಪೆ ರಾಮನಗೌಡ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದ ಅವರು, ಎಲ್ಲ ಮಕ್ಕಳಲ್ಲಿ ಸಾಮರ್ಥ್ಯ, ಶಕ್ತಿ ಇದ್ದೇ ಇರುತ್ತದೆ. ಆದರೆ ಅದನ್ನು ನಾವು ಯಾವ ರೀತಿ ಉಪಯೋಗ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಸ್ಪಷ್ಟತೆ, ಪರಿಕಲ್ಪನೆ ಇರಬೇಕು. ಜೀವನದಲ್ಲಿ ಮುಂದೆ ಏನಾಗಬೇಕು ಎಂಬುದನ್ನು ಮೊದಲೇ ಮೊದಲೇ ನಿರ್ಧರಿಸಬೇಕು. ದೊಡ್ಡ ಕನಸು ಕಾಣಬೇಕು. ಸಾಧನೆ ತುಡಿತ ಇರಬೇಕು. ನನ್ನಿಂದ ಎಲ್ಲವೂ ಸಾಧ್ಯ ಎಂಬ ಆತ್ಮವಿಶ್ವಾಸ ಇರಬೇಕು. ಸೋಲು-ಗೆಲುವಿನ ಬಗ್ಗೆ ಭಯಪಡಬಾರದು. ಅಂದಾಗಲೇ ವಿದ್ಯಾರ್ಥಿ ಜೀವನ ಸಕ್ಸಸ್ ಆಗುತ್ತದೆ ಎಂದು ಹುರಿದುಂಬಿಸಿದರು.
ಆಡಳಿತಾಧಿಕಾರಿ ಮೋಹನ ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗುಡೆ, ಡಾ.ರವಿ ಕಲಶೆಟ್ಟಿ ಇತರರಿದ್ದರು.
ಗಡಿ ಭಾಗದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಧರ್ಮ ಪ್ರಚಾರ ಪ್ರಸಾರ ಜತೆಗೆ ಅನಾಥ ಮಕ್ಕಳ ಪಾಲನೆ-ಪೋಷಣೆ, ನಿರ್ಗತಿಕರ ರಕ್ಷಣೆ ಮೂಲಕ ಸಮಾಜಕ್ಕೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ವಿದ್ಯಾ ದೇಗುಲ ತೆರೆದು ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ನೀಟ್, ಐಐಟಿಯಂತಹ ಶಿಕ್ಷಣ ನೀಡುತ್ತಿರುವುದು ಮಾದರಿ.
| ಶ್ರೀನಿವಾಸಕುಪ್ಪೆ ರಾಮನಗೌಡ ಮುಖ್ಯ ಜಾಗೃತಾಧಿಕಾರಿ, ಆರೋಗ್ಯ ಇಲಾಖೆ
ದೇಶದ ಭವ್ಯ ಸಂಪತ್ತಾಗಿರುವ ವಿದ್ಯಾರ್ಥಿಗಳು ಯಾವುದೇ ದುರ್ಗುಣ, ವ್ಯಸನಗಳಿಗೆ ಬಲಿಯಾಗಬಾರದು. ಗುಣಾತ್ಮಕ ಶಿಕ್ಷಣ ಜತೆಗೆ ಸಂಸ್ಕಾರ ಪಡೆದು ಮುನ್ನಡೆದರೆ ದೇಶ ಸಮೃದ್ಧಿ ಹೊಂದಲು ಸಾಧ್ಯ. ಶ್ರೀನಿವಾಸಕುಪ್ಪೆ ರಾಮನಗೌಡರ ಸರಳತೆ ನಮ್ಮೆಲ್ಲರಿಗೂ ಮಾದರಿ. ನಮ್ಮ ಮಕ್ಕಳಿಗೆ ಅವರು ಸ್ಫೂರ್ತಿದಾಯಕ ಮಾತುಗಳನ್ನು ಹೇಳಿರುವುದು ಖುಷಿ ನೀಡಿದೆ.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ