ಕೊಳ್ಳೇಗಾಲ ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿ ಮಾತನಾಡಿದರು. ಶ್ರೀಕಂಠ ಸ್ವಾಮೀಜಿ, ಪ್ರೇಮಲತಾ ಕೃಷ್ಣಸ್ವಾಮಿ, ಎಚ್.ಮಹಾನಂದ್, ವೆಂಕಟೇಗೌಡ, ಮಂಜುಳಾ ಇತರರು ಇದ್ದರು. 
ಜಿಲ್ಲೆ

ಸಮಯ ಸದ್ಬಳಕ್ಕೆ ಮಾಡಿಕೊಂಡರೆ ಸಾಧನೆ ಸಾಧ್ಯ

ನಾಗೇಶ ಎಸ್

ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಸಮಯವನ್ನು ಸದ್ಬಳಕ್ಕೆ ಮಾಡಿಕೊಂಡು ಅತಿ ಹೆಚ್ಚು ಅಂಕ ಗಳಿಸಿದರೆ ಸಾಧಕರಾಬಹುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸೋಮವಾರ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದರೆ ಮುಂದಿನ ಗುರಿ ಸುಲಭವಾಗಲಿದ್ದು, ಹೆಚ್ಚು ಅವಕಾಶಗಳು ನಿಮ್ಮದಾಗುತ್ತದೆ. ಸರ್ಕಾರದ ಸೌಲಭ್ಯಗಳಿಂದ ಉತ್ತಮ ಕಾಲೇಜುಗಳಲ್ಲಿ ಉಚಿತವಾಗಿ ವ್ಯಾಸಂಗ ಮಾಡಬಹುದು. ಪರೀಕ್ಷೆ ಇನ್ನು ಕೆಲವು ದಿನಗಳಿದ್ದು. ಸಮಯ ವ್ಯರ್ಥ ಮಾಡದೆ ಪರೀಕ್ಷಾ ವಿಷಯಗಳ ಅಧ್ಯಯನಕ್ಕೆ ಹೆಚ್ಚು ಸಮಯ ನಿಗದಿಗೊಳಿಸಿಕೊಳ್ಳಿ, ಓದಿರುವುದನ್ನು ಮರುಮನನ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇತ್ತು. ಆದರೀಗ ಶೈಕ್ಷಣಿಕವಾಗಿ ಬಹಳ ಮುಂದಿದ್ದೇವೆ. ರಾಜ್ಯಕ್ಕೆ 8ನೇ ಸ್ಥಾನದಲ್ಲಿ ನಮ್ಮ ಜಿಲ್ಲೆಯಿದ್ದು, ಇದು ನಮ್ಮ ಹೆಮ್ಮೆ. ಅದರಂತೆ, ಈ ಬಾರಿಯು ಹೆಚ್ಚಿನ ವಿದ್ಯಾರ್ಥಿಗಳು 625ಕ್ಕೆ 625 ಪಡೆದು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಪ್ರೇರೇಪಿಸಿದರು.

ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶವಿದೆ. ಅದನ್ನು ಸದುಪಯೋಗ ಪಡೆದುಕೊಂಡು, ಜ್ಞಾನವಂತರಾಗಬೇಕು. ಸಂವಿಧಾನದಡಿ ಎಲ್ಲರಿಗೂ ಹಕ್ಕು- ಮಾನ್ಯತೆಗಳು ದೊರೆತಿದೆ. ಮಕ್ಕಳು ಚೆನ್ನಾಗಿ ಓದಿ ಸಾಧನೆ ಮಾಡಿದರೆ ಶಿಕ್ಷಕರಿಗೆ ಖುಷಿ ಆಗುತ್ತದೆ. ಪಾಲಕರಿಗೆ ಹೆಮ್ಮೆ ಅನಿಸುತ್ತದೆ. ಆದ್ದರಿಂದ ಮೊಬೈಲ್ ಹಿಡಿದು ಸಮಯ ಕಳೆಯದೆ ಮನಸ್ಸನ್ನು ಸಮಚಿತ್ತವಾಗಿರಿಸಿಕೊಂಡು ಓದಬೇಕು. ಪರೀಕ್ಷೆಗಿರುವ 20 ದಿನಗಳು ಮೊಬೈಲ್ ಬಿಟ್ಟರೆ 20 ವರ್ಷಗಳ ಸಾಧನೆ ಅನುಕೂಲವಾಗಲಿದೆ ಎಂದರು.

ದಿ.ಎಚ್.ಕೃಷ್ಣಸ್ವಾಮಿ ಅವರು ಶೋಷಿತರ ಪರವಾಗಿ ನಿಂತವರು, ಶಿಕ್ಷಣಕ್ಕೆ ಒತ್ತು ನೀಡಿದವರು, ಅವರ ಹಾದಿಯಲ್ಲಿ ಅವರ ಪತ್ನಿ ಪ್ರೇಮಲತಾ ಕೃಷ್ಣಸ್ವಾಮಿ ಹಾಗೂ ಪುತ್ರ ಮಹಾನಂದ ಅವರು ವಿಶ್ವಚೇತನ ವಿದ್ಯಾಸಂಸ್ಥೆ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಬೆಂಗಳೂರಿನ ಪ್ರೇರಣಾ ಅಸೋಸಿಯೇಟ್ಸ್ ವೆಂಕಟೇಗೌಡ ಮಾತನಾಡಿ, ಕರೊನಾ ವೈರಸ್‌ಗಿಂತ ಮಾರಕವಾದದ್ದು ಮೊಬೈಲ್ ವೈರಸ್. ಇದು ಮಿದುಳನ್ನು ನಿಷ್ಕ್ರಿಯಗೊಳಿಸುತ್ತದೆ. ಪರೀಕ್ಷಾ ಸಮಯದಲ್ಲಿ ಮೊಬೈಲ್ ಬಳಕೆಯಿಂದ ದೂರವಿದ್ದರೆ ಒಳ್ಳೆಯದು. ಇಂದು ಕಲಿಕೆ ಚೆನ್ನಾಗಿದ್ದರೆ ಮುಂದೆ ಗಳಿಕೆಯೂ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯುತ್ತದೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಅಧ್ಯಯನ, ಅಭ್ಯಾಸ ಹಾಗೂ ಮರುಮನನ ಗುರಿ ಮುಟ್ಟಿಸುತ್ತದೆ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಿ. ಪರೀಕ್ಷೆ ಭಯ ಬೇಡ. ಪರೀಕ್ಷೆ ಸಮಯದಲ್ಲಿ ಸಮತೋಲನ ಆಹಾರ ಸೇವಿಸಿ, ಆರೇಳು ಗಂಟೆ ನಿದ್ರೆ ಮಾಡಿ, ಬೆಳ್ಳಂಬೆಳಗ್ಗೆ 5 ಗಂಟೆಗೆ ಓದುವುದರಿಂದ ಜ್ಞಾಪಕದಲ್ಲಿರುತ್ತದೆ ಎಂದು ಸಲಹೆ ನೀಡಿದರು.

ವಿಶ್ವ ಚೇತನ ಸಮೂಹ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬೆಂಗಳೂರಿನ ಡಿವೈಎಸ್ಪಿ ಎಚ್.ಕೆ.ಮಹಾನಂದ್, ಬಿಇಒ ಎಂ.ಮಂಜುಳಾ, ವಿಶ್ವ ಚೇತನ ಸಂಸ್ಥೆಯ ಸಂಯೋಜಕ ಜಗದೀಶ್, ಬಿ.ಬಸವಲಿಂಗಪ್ಪ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಕ್ಬರ್, ರೈತ ಮುಖಂಡ ಅಣಗಳ್ಳಿ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭಾ ಮಾಜಿ ಸದಸ್ಯ ಹರ್ಷ ಮತ್ತಿತರರಿದ್ದರು.