ಜಿಲ್ಲೆ

ಆಸ್ತಿ ಹಿಂಪಡೆದ ತಾಯಂದಿರು

ಹಾನಗಲ್ಲ: ಮಕ್ಕಳ ಹೆಸರಿಗೆ ವರ್ಗಾಯಿಸಿದ್ದ ಆಸ್ತಿಯನ್ನು ವೃದ್ಧೆಯರಿಬ್ಬರು ಹಿಂದಕ್ಕೆ ಪಡೆದ ಪ್ರತ್ಯೇಕ ಪ್ರಕರಣ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದ ಫಕೀರವ್ವ ಹನಕನಹಳ್ಳಿ (90) ಹಾಗೂ ಚಿಕ್ಕಾಂಶಿ ಹೊಸೂರ ಗ್ರಾಮದ ರತ್ನವ್ವ ಗುರುಪಾದಪ್ಪ ಬ್ಯಾಡಗಿ (70) ಎಂಬುವವರು ಮಕ್ಕಳ ಹೆಸರಿಗೆ ವರ್ಗಾಯಿಸಿದ್ದ ಮನೆ ಹಾಗೂ ಜಮೀನು ಮರಳಿ ಪಡೆದಿದ್ದಾರೆ.

ಪ್ರಕರಣ 1: ಫಕೀರವ್ವಳಿಗೆ 8 ಪುತ್ರರಿದ್ದಾರೆ. ಪಿತ್ರಾರ್ಜಿತವಾಗಿ 17 ಎಕರೆ ಜಮೀನು ಬಂದಿದೆ. ಎಲ್ಲ ಮಕ್ಕಳೂ ಜಮೀನನ್ನು ಸಮನಾಗಿ ಹಂಚಿದ್ದಾರೆ. ಫಕೀರವ್ವಳ ಹೆಸರಿನಲ್ಲಿದ್ದ ಮನೆ 4ನೇ ಪುತ್ರ ಶೇಕಪ್ಪ ಎಂಬುವವರಿಗೆ ಸೇರಿತ್ತು. ಆದರೆ, 5ನೇ ಪುತ್ರ ಚನಬಸಪ್ಪ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ದಾನಪತ್ರವೊಂದಕ್ಕೆ ಸಹಿ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ತಾಯಿಯ ಪೋಷಣೆ ನಿಮಿತ್ತ ಮನೆಯನ್ನು ತನಗೆ ದಾನ ಮಾಡಿರುವುದಾಗಿ ಪತ್ರದಲ್ಲಿ ದಾಖಲಿಸಿ, 2011ರಲ್ಲಿ ಭಕ್ಷೀಸ್ ಪತ್ರದ ಮೂಲಕ ವರ್ಗಾಯಿಸಿಕೊಂಡಿದ್ದ. ಬಳಿಕ ಮಗನ ನಿಷ್ಕಾಳಜಿಯಿಂದಾಗಿ ಫಕೀರವ್ವ ಇನ್ನುಳಿದ ಮಕ್ಕಳ ಮನೆಯಿಂದ ಮನೆಗೆ ಓಡಾಡುವಂತಾಗಿತ್ತು. ಕಳೆದ 7 ವರ್ಷದಿಂದ ಹೆಚ್ಚಾಗಿ 7ನೇ ಪುತ್ರ ಸಹದೇವಪ್ಪನ ಮನೆಯಲ್ಲಿ ವಾಸವಾಗಿದ್ದಳು. ಹೀಗಾಗಿ ತಾಯಿಯ ಮನೆಯನ್ನು ಮರಳಿ ಕೊಡಿಸುವಂತೆ ಸವಣೂರು ಉಪವಿಭಾಗಾಧಿಕಾರಿಗೆ ಶೇಕಪ್ಪ ಅರ್ಜಿ ಸಲ್ಲಿಸಿದ್ದರು.

ಪ್ರಕರಣ 2: ರತ್ನಮ್ಮ ಹಾಗೂ ಬಸಪ್ಪ ಬ್ಯಾಡಗಿ ದಂಪತಿಗೆ ನಾಲ್ವರು ಪುತ್ರಿಯರಿದ್ದಾರೆ. ಒಬ್ಬ ಪುತ್ರ 2007ರಲ್ಲಿ ಮೃತಪಟ್ಟಿದ್ದಾನೆ. ಹೀಗಾಗಿ ಹಿರಿಯ ಮಗಳಾದ ಅನ್ನಪೂರ್ಣ ಎಂಬುವವರ ಪುತ್ರ ಪ್ರಶಾಂತ ಹಲಸೂರ ಎಂಬಾತನನ್ನು ದತ್ತು ಪಡೆದಿದ್ದರು. ಅಲ್ಲದೆ, 3 ಎಕರೆ ಕೃಷಿ ಜಮೀನನ್ನು ಪ್ರಶಾಂತನ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ಆದರೆ, ಪ್ರಶಾಂತ ಅಜ್ಜ-ಅಜ್ಜಿಯ ಪಾಲನೆ-ಪೋಷಣೆ ಮಾಡದೆ ತನ್ನ ಸ್ವ ಗ್ರಾಮ ಹಿರೇಕಾಂಶಿಯಲ್ಲಿಯೇ ಉಳಿದಿದ್ದ. ಕಳೆದ ನವೆಂಬರ್​ನಲ್ಲಿ ಅಜ್ಜ ಬಸಪ್ಪ ನಿಧನ ಹೊಂದಿದ್ದಾರೆ. ತಂದೆಯ(ಅಜ್ಜ) ಅಂತ್ಯಕ್ರಿಯೆಯಲ್ಲಿಯೂ ಪ್ರಶಾಂತ ಪಾಲ್ಗೊಂಡಿರಲಿಲ್ಲ. ರತ್ನವ್ವ ತನ್ನ ಹೊಸೂರ ಮನೆಯಲ್ಲಿ ಏಕಾಂಗಿಯಾಗಿ ಕಾಲಕಳೆಯುತ್ತಿದ್ದಳು. ಈ ಎಲ್ಲದರ ಹಿನ್ನೆಲೆಯಲ್ಲಿ ಸವಣೂರು ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿ ತನ್ನ ಜಮೀನನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಳು. ಎರಡೂ ಪ್ರಕರಣಗಳ ಕುರಿತು ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ- 2007ರನ್ವಯ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಸಮ್ಮುಖದಲ್ಲಿ ಇಬ್ಬರಿಗೆ ಆಸ್ತಿಗಳನ್ನು ಹಸ್ತಾಂತರಿಸಿದರು.

ಪಾಲಕರನ್ನು ಕಡೆಗಣಿಸುವ ಮಕ್ಕಳಿಗೆ ಇದೊಂದು ಪಾಠವಾಗಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸುವ ಅಧಿಕಾರವನ್ನು ಸರ್ಕಾರ ನೀಡಿರುವುದಕ್ಕೆ ಸಂತಸವಿದೆ. ಆಸ್ತಿಗಾಗಿ ಪಾಲಕರನ್ನು ದೂರ ಮಾಡಿ, ವೃದ್ಧಾಶ್ರಮಗಳಿಗೆ ಕಳಿಸುವ ಮಕ್ಕಳು ಎಚ್ಚೆತ್ತುಕೊಳ್ಳಬೇಕಿದೆ

| ಅನ್ನಪೂರ್ಣ ಮುದುಕಮ್ಮನವರ ಎಸಿ