ತ್ಯಾಮಗೊಂಡ್ಲು: ಮಗು ಜನಿಸಿದ ಆರು ತಿಂಗಳು ತಾಯಿ ಕಡ್ಡಾಯವಾಗಿ ಹಾಲುಣಿಸಬೇಕು. ಇದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲೆ ಡಾ.ಎಲಿಜಬತ್ ಚೆರಿಯನ್ ಹೇಳಿದರು. ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸಿದ್ಧಾರ್ಥ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನೆಲಮಂಗಲ, ಸೋಂಪುರ, ತುಮಕೂರು ಪ್ರೇರಣ, ಮಹಾಲಕ್ಷಿ$್ಮ ಸೆಂಟ್ರಲ್, ಬೆಂಗಳೂರು ವಿಶ್ವನಿಡಂ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿಯ ಹಾಲನ್ನು ಜೀವಾಮೃತ ಎಂದೇ ಹೇಳಲಾಗುತ್ತದೆ. ಶಿಶುವಿನ ಬೆಳವಣಿಗೆ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ತಾಯಿಯ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕತೆ, ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ. ಮಗುವಿಗೆ ಇದು ಮೊದಲ ಲಸಿಕೆಯಾಗಲಿದೆ ಎಂದರು.
ಮಗು ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿಬೇಕು. ಸ್ತನ್ಯಪಾನದಿಂದ ಶಿಶು ಮರಣ ತಪ್ಪಿಸಲು ಸಾಧ್ಯ. ತಾಯಿಯ ಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯ ಮೇಲೆ ಇಲ್ಲ. ಇದನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ ಎಂದರು. ಸ್ತನ್ಯಪಾನವು ಶಿಶುಗಳಿಗೆ ಪೋಷಣೆ ಜತೆಗೆ ಅತಿಸಾರ ಮತ್ತು ನ್ಯುಮೋನಿಯಾದಂತಹ ರೋಗಗಳನ್ನು ತಡೆಯುತ್ತದೆ. ಅಲ್ಲದೆ, ತಾಯಂದಿರಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಟೈಪ್&2 ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಸ್ತನ್ಯಪಾನ ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. ಸ್ತನ್ಯಪಾನದ ಮಹತ್ವದ ಬಗ್ಗೆ ತಿಳಿಸುವುದು ಸ್ತನ್ಯಪಾನ ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದು ನೆಲಮಂಗಲ ರೋಟರಿ ಅಧ್ಯಕ್ಷ ನಾಗರಾಜ್ ಹೇಳಿದರು.
ಸಿದ್ಧಾರ್ಥ ವೈದ್ಯಕಿಯ ಮಹಾವಿದ್ಯಾಲಯದ ತೃತೀಯ ವರ್ಷದ ವೈದ್ಯಕಿಯ ವಿದ್ಯಾರ್ಥಿಗಳು ಸ್ತನ್ಯಪಾನದ ಮಹತ್ವ ತಿಳಿಸುವ ಕಿರುನಾಟಕ ಪ್ರದರ್ಶಿಸಿದರು. ಬಾಣಂತಿಯರಿಗೆ ಉಚಿತ ಒಣ ಹಣ್ಣುಗಳ ಪೋಟಿನ್ ಕಿಟ್ ವಿತರಿಸಲಾಯಿತು. ಸಿದ್ಧಾರ್ಥ ಕಾಲೇಜ್ ವೈದ್ಯಕಿಯ ವಿಭಾಗ ಮುಖ್ಯಸ್ಥ ಪ್ರೊ.ಡಾ.ಅಶೋಕ್ ಜಯರಾಂ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ನೆಲಮಂಗಲ ರೋಟರಿ ಸಂಸ್ಥೆಯ ಕಾರ್ಯದರ್ಶಿ ಆರ್.ರವಿಕುಮಾರ್, ಖಜಾಂಚಿ ಎಸ್.ಗಂಗರಾಜು, ನಿರ್ದೇಶಕರಾದ ಎಲ್.ಕುಮಾರ್, ರುದ್ರೇಗೌಡ, ರಾಮಕೃಷ್ಣಯ್ಯ ಇತರರು ಇದ್ದರು.