ಜಿಲ್ಲೆ

ತಾಯಿ ಹಾಲು ಮಗುವಿಗೆ ಮೊದಲು ಸಿಗುವ ನೈಸರ್ಗಿಕ ಆರೋಗ್ಯದಾಯಕ ಲಸಿಕೆ

ಚಿಕ್ಕಬಳ್ಳಾಪುರ: ತಾಯಿ ಹಾಲು ಮಗುವಿಗೆ ಮೊದಲು ಸಿಗುವ ನೈಸರ್ಗಿಕ ಆರೋಗ್ಯದಾಯಕ ಒಂದು ಲಸಿಕೆ ಎಂದು ಮಕ್ಕಳ ತಜ್ಞ ಡಾ.ಎಂ.ರವಿಕುಮಾರ್​ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ನಂದಿ ವೈದ್ಯಕಿಯ ವಿಜ್ಞಾನಗಳ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯು  ಕೈಗೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮಗು ಜನಿಸಿದ ಅರ್ಧಗಂಟೆಯಿಂದ ಒಂದು ಗಂಟೆಯೊಳಗಾಗಿ ಕಡ್ಡಾಯವಾಗಿ ತಾಯಿಯ ಹಾಲನ್ನು ನೀಡಬೇಕಾಗುತ್ತದೆ. ಹಾಗೆಯೇ ಕನಿಷ್ಠ 6 ತಿಂಗಳು ನಿಯಮಿತವಾಗಿ ಕುಡಿಸಬೇಕು. ಇದರಲ್ಲಿ ರ್ನಿಲಕ್ಷ$್ಯ ಧೋರಣೆ ಬೇಡ ಎಂದರು.

ತಾಯಿಯ ಹಾಲು ಅಮೃತಕ್ಕೆ ಸಮಾನವಾದುದು. ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೌಷ್ಟಿಕತೆಯ ಜತೆಗೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಮಗುವಿಗೆ ತಾಯಿಯ ಹಾಲು ನೀಡುವುದರಿಂದ ಇಬ್ಬರ ನಡುವೆ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ. ಇಂತಹ ತಾಯಂದಿರಿಗೆ ಸ್ತನ ಕ್ಯಾನ್ಸರ್​, ಗರ್ಭಕೋಶದ ಕ್ಯಾನ್ಸರ್​ ಸೇರಿದಂತೆ ಗಂಭೀರ ಕಾಯಿಲೆಗಳು ಬರುವುದು ಅಪರೂಪ ಎಂದರು.

ಮಗುವಿಗೆ ತಾಯಿ ಹಾಲುಣಿಸುವುದರಲ್ಲಿ ಹೊಸತೇನಿಲ್ಲ. ಶತ ಶತಮಾನಗಳಿಂದಲೂ ಕಾಣಲಾಗುತ್ತಿದೆ. ಈ ಪ್ರಕ್ರಿಯೆಯು ಅನೇಕ ಪ್ರಾಣಿಗಳಲ್ಲೂ ಸಹ ಇದೆ. ಆದರೆ, ಇತ್ತೀಚೆಗೆ ಆಧುನಿಕತೆಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಮಹಿಳೆಯ ಕಾರ್ಯಕ್ಷೇತ್ರವೂ ಬದಲಾಗುತ್ತಿದ್ದು ತಾಯಿ ಮತ್ತು ಮಗುವಿನ ಸುಮಧುರ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು. ಕಾರ್ಯಕ್ಷೇತ್ರ ಏನೇ ಆದರೂ, ಎಷ್ಟೇ ಕೆಲಸದ ಒತ್ತಡಗಳಿದ್ದರೂ ಮಗುವಿನ ತಾಯಿ ಎಂಬುದನ್ನು ಮಹಿಳೆ ಮರೆಯಬಾರದು. ಸ್ತನ್ಯಪಾನದ ಕುರಿತ ಮೂಢ ನಂಬಿಕೆ ಮತ್ತು ಪೂರ್ವಾಗ್ರಹಪೀಡಿತ ಧೋರಣೆಗಳನ್ನು ಬಿಡಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್​.ಎಸ್​.ಮಹೇಶ್​ ಕುಮಾರ್​ ಮಾತನಾಡಿ, ಆ.7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ನಡೆಯುತ್ತಿದ್ದು ಇದರ ಬಗ್ಗೆ ಆಯಾ ವ್ಯಾಪ್ತಿಯಲ್ಲಿ ವೈದ್ಯರು,ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್​, ನೋಡೆಲ್​ ಅಧಿಕಾರಿ ಡಾ.ವಿಜಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್​ ಮತ್ತಿತರರು ಹಾಜರಿದ್ದರು.

*ವೈಜ್ಞಾನಿಕ ವಿಧಾನಗಳ ಮಾಹಿತಿ

ಕಾರ್ಯಕ್ರಮದಲ್ಲಿ ಮಗುವಿಗೆ ಹಾಲು ಕುಡಿಸುವ ವೈಜ್ಞಾನಿಕ ವಿಧಾನಗಳು ಹಾಗೂ ಕ್ರಮಗಳ ಬಗ್ಗೆ ತಿಳಿಸಿಕೊಡಲಾಯಿತು. ಸರ್ಕಾರಿ ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ನೀಡಿದರು. ಬಾಣಂತಿಯರು ಮಗುವಿಗೆ ಎದೆಹಾಲು ನೀಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಸ್ವಚ್ಛತಾ ಕ್ರಮಗಳ ಬಗ್ಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾ ತಿಳಿಸಿಕೊಟ್ಟರು.