ಕೆ.ಬಿದರೆ ಗ್ರಾಮದಲ್ಲಿ ಮಹಿಳೆ ಕೊಲೆಯಾದ ಮನೆಗೆ ಎಸ್ಪಿ ಡಾ. ವಿಕ್ರಮ ಅಮಟೆ ಭೇಟಿ ನೀಡಿದರು. ಡಿವೈಎಸ್ಪಿ ಹಾಲಮೂರ್ತಿರಾವ್, ಶಿವಕುಮಾರ್, ಶಾಹಿದ್ ಅಫ್ರಿದಿ, ಸಿಬ್ಬಂದಿ ಇದ್ದರು. 
ಜಿಲ್ಲೆ

ಮದ್ಯದ ಅಮಲಿನಲ್ಲಿ ತಾಯಿಯ ಕೈ ಕೊಯ್ದು ಕೊಲೆ

ಎಸ್.ಎನ್.ರವೀಂದ್ರ

ಕಡೂರು: ಕೆ.ಬಿದರೆ ಗ್ರಾಮದಲ್ಲಿ ಮದ್ಯ ಕುಡಿಯಲು ಹಣ ನೀಡದಿದ್ದಕ್ಕೆ ತಾಯಿಯನ್ನೇ ಮಗ ಕೊಲೆ ಮಾಡಿದ್ದಾನೆ.

ಕೆ.ಬಿದರೆ ಗ್ರಾಮದ ಸಂತೋಷ್(26) ಕೊಲೆ ಮಾಡಿದ ಆರೋಪಿಯಾಗಿದ್ದು, ಕಮಲಮ್ಮ (56) ಮೃತ ದುರ್ದೈವಿ. ಶನಿವಾರ ತಡರಾತ್ರಿ ಮದ್ಯದ ಅಮಲಿನಲ್ಲಿದ್ದ ಸಂತೋಷ್ ಮನೆಯಲ್ಲಿ ತಾಯಿ ಜತೆ ಜಗಳವಾಡಿದ್ದು, ಕುಪಿತಗೊಂಡು ತಾಯಿ ಕಮಲಮ್ಮಳ ಅವರ ಬಲಗೈಯನ್ನು ಬ್ಲೇಡ್‌ನಿಂದ ಕೊಯ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅಸ್ಪಸ್ಥಗೊಂಡರು. ಕೂಡಲೇ ನೆರೆಹೊರೆಯವರು ಆಂಬುಲೆನ್ಸ್‌ನಲ್ಲಿ ಸಿಂಗಟಗೆರೆ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರು. ಸಂತೋಷ್‌ನನ್ನು ಪಂಚನಹಳ್ಳಿ ಠಾಣೆ ಪಿಎಸ್‌ಐ ಶಾಹಿದ್ ಅಫ್ರಿದಿ ಬಂಧಿಸಿದರು. ಆರೋಪಿ ಅವಿವಾಹಿತನಾಗಿದ್ದು, ಈ ಹಿಂದೆ ಬೈಕ್ ಕಳವು ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಭಾನುವಾರ ಗ್ರಾಮಕ್ಕೆ ಎಸ್ಪಿ ಡಾ. ವಿಕ್ರಮ ಅಮಟೆ ಹಾಗೂ ಡಿವೈಎಸ್ಪಿ ಹಾಲಮೂರ್ತಿರಾವ್ ಭೇಟಿ ನೀಡಿದರು. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡೂರು ಸಿಪಿಐ ಶಿವಕುಮಾರ್, ಸಿಬ್ಬಂದಿ ಪ್ರವೀಣ್, ಆನಂದ್, ಜಗದೀಶ್ ಇದ್ದರು.