ಜಿಲ್ಲೆ

ವಿದ್ಯುತ್ ತಂತಿ ತುಂಡಾಗಿ ಬಿದ್ದು ತಾಯಿ, ಇಬ್ಬರು ಮಕ್ಕಳ ದುರ್ಮರಣ: ಅಕಾಲಿಕ ಮಳೆಗೆ ಚಿಂಚೋಳಿಯಲ್ಲಿ ದುರ್ಘಟನೆ

ಕಲಬುರಗಿ : ಕಳೆದ ತಡರಾತ್ರಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಅಕಾಲಿಕ ಮಳೆ ಬಂದು ಬಿರುಗಾಳಿಯಿಂದ ಜೆಸ್ಕಾಂ ವಿದ್ಯುತ್ ತಂತಿ ಕಡಿದು ಬಿದ್ದು ತಾಯಿ, ಇಬ್ಬರು ಮಕ್ಕಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಚಿಂಚೋಳಿ ಪಟ್ಟಣದ ಧನಗರಗಲ್ಲಿಯ ನಿವಾಸಿಗಳಾಗಿದ್ದ ಝರಣಮ್ಮ (42) ,ಪುತ್ರರಾದ ಮಹೇಶ್ (21) , ಸುರೇಶ್( 20 ) ಅವಘಡದಲ್ಲಿ ಬಲಿಯಾದವರು. ತಂದೆ ಗಾಯಗೊಂಡಿದ್ದಾರೆ.

ಶನಿವಾರ ಮಧ್ಯರಾತ್ರಿ ಚಿಂಚೋಳಿ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಅಬ್ಬರದ ಮಳೆ ಸುರಿದೆ. ಮಳೆ ಬರುತ್ತಿದ್ದರಿಂದ ಮನೆಯ ಹೊರಗಡೆ ಇಟ್ಟಿದ್ದ ತೊಗರಿ ಹೊಟ್ಟಿಗೆ ಪ್ಲ್ಯಾಸ್ಟಿಕ್ ಚೀಲವನ್ನು ಹೊದಿಸಲು ಹೋದಾಗ ವಿದ್ಯುತ್ ತಂತಿ ಕಟ್ ಆಗಿ ಬಿದ್ದಿದೆ‌. ತಾಯಿ ಮೊದಲು ವಿದ್ಯುತ್ ಶಾಕ್ ಹೊಡೆದಿದೆ. ತಾಯಿಯನ್ನು ವಿದ್ಯುತ್ ಶಾಕ್ ನಿಂದ ಬಿಡಿಸೋದಕ್ಕೆ ಹೊದ ಇಬ್ಬರು ಮಕ್ಕಳಿಗೂ ಒಬ್ಬರ ನಂತರ ಒಬ್ಬರಿಗೆ ಶಾಲ್ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಪೊಲೀಸರು ಹಾಗೂ ಜೆಸ್ಕಾಂ ಸಿಬ್ಬಂದಿ ಭೇಟಿ ನೀಡಿದರು. ಈ ಕುರಿತು‌ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.