ಜಿಲ್ಲೆ

ಮಾತೃಭಾಷೆಯೇ ಅತ್ಯಂತ ಶ್ರೇಷ್ಠ : ಸಾಹಿತಿ ಬನ್ನೂರು ಕೆ. ರಾಜು

ಮೈಸೂರು: ಜಗತ್ತಿನಲ್ಲಿ ಎಷ್ಟೇ ಭಾಷೆಗಳಿದ್ದರೂ ಕೂಡ ಅವರವರ ಮಾತೃಭಾಷೆಯೇ ಅವರಿಗೆ ಶ್ರೇಷ್ಠವಾಗಿದ್ದು, ವಿದ್ಯೆ ಕಲಿಯಲು ಮಾಧ್ಯಮ ಯಾವುದಾದರೂ ಕನ್ನಡ ಆತ್ಮವಾಗಿರ ಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೆ.ಎನ್ ಇನ್ನೋವೆಟಿವ್ ಗ್ಲೋಬಲ್ ಸ್ಕೂಲ್‌ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿಭಾನುವಾರ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ 50ನೇ ಸುವರ್ಣ ಕರ್ನಾಟಕ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡವೆನ್ನುವುದು ತಾಯಿ-ಮಗುವಿನ ಕರುಳು ಬಳ್ಳಿಯ ಸಂಬಂಧವಾಗಿದ್ದು, ಅರಿವಿಗೆ ಅನ್ಯ ಭಾಷೆಗಳು ಬೇಕಾದರೂ ಜೀವನಕ್ಕೆ ಮಾತೃಭಾಷೆ ಕನ್ನಡವೇ ಬೇಕೆಂದರು. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ದುಡಿದವರು, ಮಡಿದವರು, ಹೋರಾಡಿದವರು ಸಹಸ್ರ ಜನ ಇಲ್ಲಿ ಆಗಿ ಹೋಗಿದ್ದಾರೆ. ಕನ್ನಡದ ವೀರ ಪುರುಷರಷ್ಟೇ ಕನ್ನಡದ ವೀರ ನಾರಿಯರೂ, ಕೆಚ್ಚೆದೆಯ ಹೋರಾಟಗಾರ್ತಿಯರೂ ಸಹ ಬೆವರು ಸುರಿಸಿ, ರಕ್ತ ಹರಿಸಿ ನಾಡನ್ನು ಕಟ್ಟಿದ್ದಾರೆ. ವಿಶೇಷವಾಗಿ ಜಯದೇವಿತಾಯಿ ಲಿಗಾಡೆ ಅವತ್ತಿನ ಕಾಲದಲ್ಲಿ ಮಹಾರಾಷ್ಟ್ರ ಸರ್ಕಾರದ ಅಧೀನದಲ್ಲಿದ್ದ 250 ಕನ್ನಡ ಶಾಲೆಗಳನ್ನು ಶಿಕ್ಷಕರಿಗೆ ಸಂಬಳ ಕೊಡಲು ನಮ್ಮಲ್ಲಿ ಹಣವಿಲ್ಲವೆಂದು ಕುಂಟು ನೆಪ ಹೇಳಿ ಮಹಾರಾಷ್ಟ್ರ ಸರ್ಕಾರ ಮುಚ್ಚಲು ಹೊರಟಾಗ ಅಷ್ಟೂ ಶಾಲೆಗಳ ಶಿಕ್ಷಕರಿಗೆ ಸ್ವಂತ ತಮ್ಮ ಕೈ ನಿಂದ ಸಂಬಳ ನೀಡಿ ಕನ್ನಡ ಶಾಲೆಗಳನ್ನು ನಡೆಸಿದರು. ಲಿಗಾಡೆ ಅವರಂತಹ ಹೃದಯವಂತಿಕೆಯ ತ್ಯಾಗವನ್ನು ನಾಡು ಮರೆಯುವಂತೆಯೇ ಇಲ್ಲ. ಇವರೆಲ್ಲರ ಹೋರಾಟ ಮತ್ತು ತ್ಯಾಗದ ಫಲ ಇವತ್ತು ಕನ್ನಡಕ್ಕೆ , ಕರ್ನಾಟಕಕ್ಕೆ ಯಾರು ಎಷ್ಟೇ ತೊಂದರೆ ಕೊಟ್ಟರೂ ಅದೆಲ್ಲವನ್ನೂ ನ್ಯಾಯಯುತವಾಗಿಯೇ ಎದುರಿಸಿ ದೇಶದಲ್ಲೇ ಕರ್ನಾಟಕ ಅತ್ಯಂತ ಸುಭಿಕ್ಷ ನಾಡಾಗಿ ಕಂಗೊಳಿಸುತ್ತಿದೆ ಎಂದರು.

ಕಾಲೇಜಿನ ಅಧ್ಯಕ್ಷ ಡಾ.ಕೆ.ಎನ್. ಚಂದ್ರಶೇಖರ್ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕರ ನಾಡು ಕನ್ನಡಿಗರ ಹೋರಾಟದ ಫಲವಾಗಿ 1956 ನವೆಂಬರ್ 1ರಂದು ಏಕೀಕರಣ ಗೊಂಡು ಅದುವರೆಗೂ 9 ಜಿಲ್ಲೆಗಳಿದ್ದ ಮೈಸೂರು ರಾಜ್ಯ19 ಜಿಲ್ಲೆಗಳಾಗಿ ವಿಶಾಲ ಮೈಸೂರು ರಾಜ್ಯವಾಯಿತು. ತದನಂತರ ಕರ್ನಾಟಕ ಹೆಸರಾಗಬೇಕೆಂದು 17 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ದೇವರಾಜ ಅರಸು ಮುಖ್ಯ ಮಂತ್ರಿಗಳಾಗಿದ್ದ ಕಾಲದಲ್ಲಿ 1973 ನವೆಂಬರ್ 1 ರಂದು ವಿಶಾಲ ಮೈಸೂರು ಕರ್ನಾಟಕ ವೆಂದು ಹೆಸರಾಯಿತು ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಬನ್ನೂರು ಕೆ.ರಾಜು ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ತೇಜಸ್, ಜೋಸೆಫ್, ಉಪನ್ಯಾಸಕರಾದ ಕಾವ್ಯಾ, ಸುರಭಿ, ಲಾವಣ್ಯ ಇತರರಿದ್ದರು.