ಜಿಲ್ಲೆ

ಮಾತೃಭಾಷೆಯಲ್ಲಿ ಆತ್ಮೀಯ ಸಂಬಂಧ ಇದೆ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

ಮೈಸೂರು: ಕನ್ನಡ ಹೃದಯವಂತ ಭಾಷೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.


ಅಮೆರಿಕ ಕನ್ನಡ ಕೂಟಗಳ ಆಗರ ಅಕ್ಕ ವತಿಯಿಂದ ಅಮೆರಿಕಾದ ವರ್ಜಿನಿಯಾದ ರಿಚ್ಮಂಡ್‌ನಲ್ಲಿ ಶುಕ್ರವಾರ ನಡೆದ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.


ಜಗತ್ತಿನ ಪ್ರತಿಯೊಂದು ಜೀವಿಗೂ ಒಂದು ಭಾಷೆಯಿದೆ. ಮನುಷ್ಯನ ಬದುಕಿಗೂ ಮಾಧ್ಯಮವಾಗಿ ಭಾಷೆ ಅವಶ್ಯಕವಾದುದು. ಒಂದು ಭಾಷೆ ಕೇವಲ ಸಂವನಹಕ್ಕೆ ಮಾತ್ರವಲ್ಲ, ಅದರ ಮೂಲಕ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಮಾತೃಭಾಷೆಯಲ್ಲಿ ಆತ್ಮೀಯ ಸಂಬಂಧ ಹಾಗೂ ಪರಸ್ಪರ ಅನ್ಯೋನತೆಗಳಿರುತ್ತವೆ ಎಂದರು.


ಹೃದಯದ ಅನಿಸಿಕೆಗಳನ್ನು ಹಂಚಿಕೊಳ್ಳಲು ಭಾಷೆಯ ಅವಶ್ಯಕತೆಯಿದೆ. ಕನ್ನಡ ಭಾಷೆಗೆ ವಿಶೇಷವಾದ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದೆ. ಭಾರತದ ಎಲ್ಲ ರಾಜ್ಯಗಳಿಂದಲೂ ಬಂದು ಹೆಚ್ಚು ಜನ ನೆಲೆಸುವಂತಹ ನಾಡು ಎಂದರೆ ಕರ್ನಾಟಕ. ಆಧ್ಯಾತ್ಮಿಕ, ರಾಜಕೀಯ, ಔದ್ಯೋಗಿಕವಾಗಿ ಅನ್ಯರಿಗೂ ಆಶ್ರಯ ನೀಡುವಂತಹ ಹೃದಯವಂತಿಕೆ ಕನ್ನಡಿಗರಿಗಿದೆ. ಟಿಬೆಟ್‌ನಿಂದ ಜನರು ನಿರಾಶ್ರಿತರಾಗಿ ಬಂದಾಗ ಕರ್ನಾಟದಲ್ಲಿಯೂ ಅವರಿಗೆ ಆಶ್ರಯ ನೀಡಿದುದನ್ನು ದಲೈಲಾಮರವರು ಯಾವಾಗಲೂ ನೆನೆಯುತ್ತಾರೆ ಎಂದರು.


ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ನಾಡಿನ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನು ಮರೆಯಬಾರದು ಎಂಬ ಕಾರಣಕ್ಕಾಗಿ ಅಮೆರಿಕ ಕನ್ನಡ ಕೂಟಗಳ ಆಗರವನ್ನು ಸ್ಥಾಪಿಸಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುತ್ತಿರುವುದು ಸಂತಸದ ಸಂಗತಿ. ಕಲೆ, ಸಾಹಿತ್ಯ, ನೃತ್ಯ, ಸಂಗೀತ, ನಾಟಕ, ಜಾನಪದ ನೃತ್ಯಗಳ ಸಾಂಸ್ಕೃತಿಕ ಸಂಭ್ರಮಗಳನ್ನು ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಕಾಣಬಹುದಾಗಿದೆ. ರಿಚ್‌ಮಂಡ್ ನಗರ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕರ್ನಾಟಕದಿಂದ ಅನೇಕ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಆಗಮಿಸಿದ್ದಾರೆ. ವಿಶೇಷವಾಗಿ ಈ ಬಾರಿ ಪೌರಕಾರ್ಮಿಕ ಕಲಾವಿದರೂ ಜಾನಪದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾವೇರಿ ಹಾಗೂ ರಿಚ್ಮಂಡ್ ಕನ್ನಡ ಸಂಘಗಳ ಸಹಯೋಗದಲ್ಲಿ ಸಮ್ಮೇಳನ ನಡೆಯುತ್ತಿರುವುದು ಶ್ಲಾಘನೀಯ. ಡಾ.ಅಮರನಾಥಗೌಡರಿಗೆ ಇಲ್ಲಿನ ಎಲ್ಲ ಕನ್ನಡ ಸಂಘಗಳು ಬೆನ್ನೆಲುಬಾಗಿ ನಿಂತಿರುವುದು ಸ್ತುತ್ಯಾರ್ಹ. ಸಂಘಟಿತವಾದ ಪ್ರಯತ್ನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.


ಅಕ್ಕ ಅಧ್ಯಕ್ಷ ಡಾ.ಅಮರನಾಥಗೌಡ, ಸ್ವಾಗತ ಸಮಿತಿ ಅಧ್ಯಕ್ಷ ರವಿ ಬೋರೇಗೌಡ, ಕಾರ್ಯದರ್ಶಿ ಮಾದೇಶ್ ಬಸವರಾಜು ಮಾತನಾಡಿದರು.
ಸೆನೆಟರ್ ಡಾ. ಡೇವಿಡ್ ಒವನ್, ಅಟಾರ್ನಿ ಜನರಲ್ ಶಾನನ್ ಟೇಲರ್ ಹಾಗೂ ಡಾ.ನಾ.ಸೋಮೇಶ್ವರ ಮಾತನಾಡಿ ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು.


ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ, ನವೀನ್‌ಕೃಷ್ಣ, ರವಿ ಬೋರೇಗೌಡ, ಷಣ್ಮುಖ ಅಯ್ಯರ್, ಹರಿದಾಸ್, ನಾಗಶಂಕರ್, ಶಿವಮೂರ್ತಿ ಕೀಲಾರ, ತುಮಕೂರು ದಯಾನಂದ, ಪ್ರಭುದೇವ್ ಉಪಸ್ಥಿತರಿದ್ದರು.


ಕರ್ನಾಟಕದಿಂದ ಶಾಸಕರು, ಅಧಿಕಾರಿಗಳು, ಕಲಾವಿದರು ಹೀಗೆ ಅನೇಕ ಗಣ್ಯಮಾನ್ಯರು ಆಗಮಿಸಿದ್ದರು. ಉತ್ತರ ಅಮೆರಿಕದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು, ಅನಿವಾಸಿ ಭಾರತೀಯರು, ಸ್ಥಳೀಯ ಕಲಾವಿದರು, ಪ್ರತಿನಿಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.