ಚನ್ನಪಟ್ಟಣ: ಅನ್ಯಭಾಷೆಯನ್ನು ಮೆಚ್ಚಿಕೊಳ್ಳುವುದು ತಪ್ಪೇನಿಲ್ಲ. ಆದರೆ, ಮಾತೃಭಾಷೆ ಬಗ್ಗೆ ಕೀಳರಿಮೆ ಸಲ್ಲದು ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ನಗರದ ಕೋಟೆಯ ನ್ಯೂ ಮಿಲೇನಿಯಂ ಶಾಲೆ ಆವರಣದಲ್ಲಿ ಶುಭೋದಯ ಸಾಂಸ್ಕೃತಿಕ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಯಲ್ಲಿ ನಮ್ಮ ಭಾಷೆಯ ಬಗ್ಗೆ ತಾತ್ಸಾರ ಮನೋಭಾವ ಹೆಚ್ಚುತ್ತಿದೆ ಎಂದು ತಿಳಿಸಿದರು.
ಯುವಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಸರ್ಕಾರ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಆಂಗ್ಲ ವ್ಯಾಮೋಹ, ಕನ್ನಡ ಅವಗಣನೆಗೆ ಕಾರಣ: ನಿವೃತ್ತ ಉಪಪ್ರಾಂಶುಪಾಲ ಟಿ.ಆರ್.ರಂಗಸ್ವಾಮಿ ಮಾತನಾಡಿ, ಆಂಗ್ಲಭಾಷೆ ವ್ಯಾಮೋಹದಿಂದ ನಮ್ಮ ಸಮೃದ್ಧ ಕನ್ನಡ ಭಾಷೆ ಅವಗಣನೆಗೆ ತುತ್ತಾಗುತ್ತಿದೆ. ಜೀವನ ನಿರ್ವಹಣೆಗೆ ಆಂಗ್ಲಭಾಷೆ ಅನಿವಾರ್ಯ ಎಂಬ ತಪ್ಪುಕಲ್ಪನೆ ನಿರ್ವಣವಾಗಿರುವುದು ಈ ಬೆಳವಣಿಗೆಗೆ ಕಾರಣ. ಉದ್ಯೋಗ ಕ್ಷೇತ್ರದಲ್ಲಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಹೋಗಲಾಡಿಸುವ ಪ್ರಯತ್ನಗಳಾಗಬೇಕು ಎಂದರು.
ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ದುಡಿದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕು. ನಮ್ಮ ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದರಾಜೇಗೌಡ ಮತ್ತು ಟಿ.ಆರ್.ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ಸಮಾಜ ಸೇವಕ ರಾಮಕೃಷ್ಣೇಗೌಡ, ನಿವೃತ್ತ ಶಿಕ್ಷಕರಾದ ನಾಗವಾರ ಸಿದ್ದಪ್ಪ, ಚ.ಶಿ.ವೆಂಕಟೇಗೌಡ, ಚೌ.ಪು.ಸ್ವಾಮಿ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಸಿ.ರಾಜಶೇಖರ್, ನಿವೃತ್ತ ಪ್ರಾಂಶುಪಾಲ ಪುಟ್ಟಲಿಂಗಯ್ಯ, ಶಿಕ್ಷಕರಾದ ನಂ.ಶಿವಲಿಂಗಯ್ಯ, ರಾಮಣ್ಣ, ಬ್ರಹ್ಮಣೀಪುರ ರಾಮಕೃಷ್ಣಯ್ಯ ಉಪಸ್ಥಿತರಿದ್ದರು.