ಜಿಲ್ಲೆ

ಮಾತೃಭಾಷೆ ಕಡೆಗಣನೆ ಸಲ್ಲ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಮತ, ಅನ್ಯ ಭಾಷಿಕರಿಗೂ ಕನ್ನಡ ಕಲಿಸಿ

Bengaluru Rural

ನೆಲಮಂಗಲ: ಆಂಗ್ಲ ಶಿಕ್ಷಣ ವ್ಯಾಮೋಹಕ್ಕೆ ಒಳಗಾಗಿರುವ ಕನ್ನಡಿಗರು ಮಾತೃಭಾಷೆ ಕಡೆಗಣಿಸುವುದು ಸರಿಯಲ್ಲ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

2 ಸಾವಿರ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ್ದ ಬೆಂಗಳೂರಿನಲ್ಲಿ ಶೇ.30 ಕನ್ನಡಿಗರು, ಶೇ.70 ಅನ್ಯಭಾಷಿಗರಿದ್ದಾರೆ. ತಾಲೂಕಿನಲ್ಲಿ ವ್ಯಾಪಾರ ವ್ಯವಹಾರ ಮಾಡುವ ಬಹುತೇಕ ಮಂದಿ ಹೊರರಾಜ್ಯದವರೇ ಆಗಿದ್ದಾರೆ. ದೇಶದ ಎಲ್ಲ ಭಾಷಿಗರಿಗೂ ಕರ್ನಾಟಕ ಆಶ್ರಯ ನೀಡಿದ್ದು, ಅನ್ಯಭಾಷಿಗರೂ ಕನ್ನಡ ಭಾಷೆ ಕಲಿಯಬೇಕಿದೆ. ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಯಲ್ಲಿ ನಾಡಿನ ಕವಿ, ಸಾಹಿತಿಗಳು ಅನನ್ಯವಾದ ಕೊಡುಗೆ ನೀಡಿರುವುದನ್ನು ಸ್ಮರಿಸಬೇಕಿದೆ ಎಂದರು.

6 ತಿಂಗಳಿಂದ ಕರೊನಾ ಸೋಂಕಿನಿಂದ ರಾಜ್ಯದ ಜನ ಸಂಕಷ್ಟಕ್ಕೆ ಅನುಭವಿಸುತ್ತಿದ್ದು, ಇತ್ತೀಚೆಗೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಕಡಿಮೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ದೂರವಾಗಿದೆ ಎಂದರು.

ತಹಸೀಲ್ದಾರ್ ಎಂ. ಶ್ರೀನಿವಾಸ್ ಮಾತನಾಡಿ, ಕರ್ನಾಟಕ ಉತ್ತಮ ಸಂಸ್ಕೃತಿ, ಸಂಪದ್ಭರಿತ ಸಾಹಿತ್ಯ ತುಂಬಿರುವ ನಾಡು. ಈ ಸುಂದರ ನಾಡಿನಲ್ಲಿ ಜನಿಸಿರುವ ಪ್ರತಿಯೊಬ್ಬರೂ ಪುಣ್ಯವಂತರು. ಪಾಶ್ಚಿಮಾತ್ಯ ಭಾಷೆ, ಸಂಸ್ಕೃತಿ ಅನುಕರಣೆ ಭರದಲ್ಲಿ ಕನ್ನಡ ಭಾಷೆ ದೂರಮಾಡುವುದು ಸರಿಯಲ್ಲ. ಮಾತೃಭಾಷೆ, ಜನ್ಮಭೂಮಿ ಸ್ವರ್ಗಗಿಂತ ಮಿಗಿಲು ಎಂದರು.

ಗಣ್ಯರಿಂದ ರೈತ ಗೀತೆಗೆ ಅಗೌರವ: ಕಾರ್ಯಕ್ರಮದಲ್ಲಿ ರೈತಗೀತೆಗೆ ಸಾರ್ವಜನಿಕರು ಎದ್ದು ನಿಂತು ಗೌರವ ಸಲ್ಲಿಸಿದರೂ ವೇದಿಕೆಯಲ್ಲಿದ್ದ ತಾಲೂಕುಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಎದ್ದು ಗೌರವ ನೀಡದಿರುವುದನ್ನು ಖಂಡಿಸಿದ ರೈತ ಮುಖಂಡ ಪ್ರದೀಪ್, ತಾಲೂಕು ಆಡಳಿತದಿಂದ ತಮಗೆ ಮಾಡಿದ್ದ ಸನ್ಮಾನವನ್ನು ತಾಲೂಕು ಆಡಳಿತಕ್ಕೆ ಹಿಂತಿರುಗಿಸಿದರು. ರೈತ ಮುಖಂಡರು ಕನ್ನಡ ಪರಸಂಘಟನೆ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಧ್ಯೆ ಮಾತಿನ ಚಕ್ಕಮಕ್ಕಿಗೆ ಕಾರಣವಾಯಿತು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ 3 ಮಂದಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ನೀಡಿ ಗೌರವಿಸಲಾಯಿತು.

ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್,ಮಲ್ಲಯ್ಯ, ತಾಲೂಕು ಪಂಚಾಯಿತಿ ಇಒ ಲಕ್ಷ್ಮೀನಾರಾಯಣ್, ಸ್ಥಾಯಿಸಮಿತಿ ಅಧ್ಯಕ್ಷ ಬಿ.ರಂಗನಾಥ್, ಡಿವೈಎಸ್‌ಪಿ ಮೋಹನ್‌ಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ರಮೇಶ್, ನಗರಸಭೆ ಆಯುಕ್ತ ಎಲ್.ಮಂಜುನಾಥ್‌ಸ್ವಾಮಿ, ಸಂಚಾರಿ ವೃತ್ತ ನಿರೀಕ್ಷಕ ಎಸ್.ಆರ್.ವೀರೇಂದ್ರಪ್ರಸಾದ್, ಶಿರಸ್ತೇದಾರ ಎಂ.ವಿ.ಮಂಜುನಾಥ್, ರಾಜಸ್ವ ನಿರೀಕ್ಷಕ ರವಿಕುಮಾರ್, ಕಸಾಪ ಅಧ್ಯಕ್ಷ ಸಿ.ಕೇಶವ್‌ಮೂರ್ತಿ, ಜೈಕರವೇ ರಾಜ್ಯಾಧ್ಯಕ್ಷ ಬಾಬು, ಜನಸೈನ್ಯ ಸಂಘಟನೆ ಸಧ್ಯಕ್ಷ ನರಸಿಂಹಯ್ಯ ಉಪಸ್ಥಿತರಿದ್ದರು.