ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ಗಸ್ತ್ಯಾನಖೋಡಿಯ ಗದ್ದೆಯಲ್ಲಿ ವಾಸವಾಗಿದ್ದ ತಾಯಿ ಮತ್ತು ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ನಂದಗಾಂವ ಗ್ರಾಮದ ತಾಯಿ ಚಂದ್ರವ್ವ ಅಪ್ಪಾರಾಯ ಇಚೇರಿ (65), ಮಗ ವಿಠ್ಠಲ ಅಪ್ಪಾರಾಯ ಇಚೇರಿ (42) ಕೊಲೆಯಾದವರು. ಪಕ್ಕದ ಹೊಲದವರು ಜಾನುವಾರುಗಳಿಗೆ ಮೇವು ತರಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಕರು ಹೇಳುವ ಪ್ರಕಾರ ಕಳೆದ ಹಲವು ತಿಂಗಳ ಹಿಂದೆ ಚಂದ್ರವ್ವ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಪರಿಹಾರ ಹಾಗೂ ಆಸ್ಪತ್ರೆ ಖರ್ಚು ನೀಡಬೇಕು ಎಂದು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಪ್ರಕರಣ ಹಿಂಪಡೆಯುವಂತೆ ಮಾತುಕತೆ ಕೂಡ ಆಗಿತ್ತು. ಹಣ ಕೊಡುವ ದಿನ ಸಮೀಪ ಬಂದಿದ್ದರಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಅಥಣಿ ಡಿವೆಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐಗಳಾದ ಕುಮಾರ ಹಾಡಕರ, ಗಿರಿಮಲ್ಲಪ್ಪ ಉಪ್ಪಾರ, ಶಿವಾನಂದ ಕಾರಜೋಳ, ತನಿಖಾ ಸಹಾಯಕರಾದ ಮಲ್ಲಯ್ಯ ಹಿರೇಮಠ, ಸುಭಾಷ ಬಬಲೇಶ್ವರ ಹಾಗೂ ಬೆರಳಚ್ಚು ಹಾಗೂ ಶ್ವಾನದಳದ ತಂಡ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.