ತುಮಕೂರು: ಹಿಂದು ಸಂಸ್ಕೃತಿಯಲ್ಲಿ ಗೋವಿಗೆ ತಾಯಿ ಸ್ಥಾನ ನೀಡಲಾಗಿದೆ. ಆ ಮೂಲಕ ಪುಣ್ಯಕೋಟಿಯಲ್ಲಿ ಕೋಟ್ಯಾನುಕೋಟಿ ದೇವರನ್ನು ಕಾಣುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ ಹೇಳಿದರು.
ನಗರದ ಗೆದ್ಲಹಳ್ಳಿ ರಸ್ತೆಯಲ್ಲಿರುವ ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನದ ವತಿಯಿಂದ ಗುರುವಾರ ಆಯೋಜಿಸಿದ್ದ ನವದೇವಿ ದೇವಸ್ಥಾನ ಪ್ರತಿಷ್ಠಾ ಮತ್ತು ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಮಾತನಾಡಿದ ಅವರು, ಗೋವು ಕೇವಲ ಪ್ರಾಣಿಯಲ್ಲ. ಕರ್ನಾಟಕ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ತಾಯಿ ಸ್ಥಾನ ಇದೆ ಎಂಬುದನ್ನು ನಿರೂಪಿಸಿದೆ ಎಂದರು.
ಗೋಹತ್ಯೆ ಪ್ರತಿಬಂಧಕ ಕಾನೂನಿಗೆ ಅಂಗೀಕಾರ ಪಡೆದಿರುವ ಸಿಎಂ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಈ ಕಾನೂನು ಕೇವಲ ಧರ್ಮದ ವಿರುದ್ಧ ಆಗಲೀ, ಜಾತಿಯ ವಿರುದ್ಧವಾಗಲೀ ಅಲ್ಲ. ಇದು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾನೂನಾಗಿದೆ ಎಂದು ತಿಳಿಸಿದರು. ದೇಶದಲ್ಲಿ ಮಹಾವೀರ, ಬುದ್ಧ ಹಾಗೂ ಗಾಂಧೀಜಿಯವರ ಚಿಂತನೆಗಳನ್ನು ನಾವು ಅರಿಯಬೇಕಿದೆ. ಅಹಿಂಸೋ ಪರಮೋಧರ್ಮ ಎಂಬ ಘೋಷವಾಕ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಿದ್ದಗಂಗಮಠದ ಸಿದ್ದಲಿಂಗಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ.ಶಿವನಾಂದ ಶಿವಾಚಾರ್ಯ ಸ್ವಾಮೀಜಿ, ಮೋಹನ್‌ಲಾಲ್, ಚಂಪಾಲಾಲ್ ಇದ್ದರು.
ಹೆಸರಿನ ಮುಂದೆ ಮೋದಿ ಸೇರಿಸಿಕೊಳ್ಳಿ: ದೇಶದ ವಿವಿಧೆಡೆ ಬದುಕು ಕಂಡುಕೊಂಡಿರುವ ರಾಜಸ್ಥಾನ ಹಾಗೂ ಗುಜರಾತ್ ಮೂಲದವರು ತಮ್ಮ ಹೆಸರಿನ ಮುಂದೆ ’ಮೋದಿ’ ಎಂದು ಸೇರಿಸಿಕೊಳ್ಳಿ. ತನ್ನಿಂತಾನೇ ನಿಮ್ಮ ಗೌರವ ಇನ್ನಷ್ಟು ಹೆಚ್ಚಲಿದೆ ಎಂದು ಪ್ರಹ್ಲಾದ್ ಮೋದಿ ಹೇಳಿದರು. ಇದರಿಂದ ಪ್ರಧಾನಿ ಮೋದಿ ಅವರಿಗಾಗಲಿ ಅಥವಾ ಅವರ ಕುಟುಂಬಕ್ಕಾಗಲೀ ಯಾವುದೇ ರೀತಿಯ ಲಾಭವಿಲ್ಲ. ಬದಲಾಗಿ ಸಮಾಜದ ಗೌರವ ಹೆಚ್ಚಿಸಲಿದೆ. ರಾಥೋಡ್, ಸಾಹೂ, ಜೈಸ್ವಾಲ್ ಈ ರೀತಿಯ ಹೆಸರು ಕೇವಲ ಪರಿವಾರ ಗುರುತಿಸಲು ಸಹಕಾರಿಯಾಗುತ್ತದೆ. ಹಾಗಾಗಿ, ತಮ್ಮ ಹೆಸರಿನ ಮುಂದೆ ’ಮೋದಿ’ ಎಂದು ನಮೂದಿಸಿ ಸಮುದಾಯದ ಹೆಸರನ್ನು ಪ್ರಚುರಪಡಿಸುವಂತೆ ಪ್ರಹ್ಲಾದ್ ಮೋದಿ ಸಲಹೆಕೊಟ್ಟರು.