ಜಿಲ್ಲೆ

ಭಾರತದಲ್ಲಿ ಗೋವುಗಳಿಗೆ ತಾಯಿ ಸ್ಥಾನ

ಶಿಗ್ಗಾಂವಿ: ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಕಾಶಿ ಶಾಖಾಮಠದ ಗೋಶಾಲೆಗೆ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಗೋವುಗಳನ್ನು ದಾನ ಮಾಡಿದರು.

ಗೋವುಗಳನ್ನು ಸ್ವೀಕರಿಸಿ ಮಾತನಾಡಿದ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು, ಭಾರತೀಯರು ಗೋವುಗಳಿಗೆ ತಾಯಿ ಸ್ಥಾನ ನೀಡಿದ್ದಾರೆ. ಹೆತ್ತ ತಾಯಿ ಮಗುವಿಗೆ ವರ್ಷದವರೆಗೆ ಎದೆಹಾಲು ಉಣಿಸಿ ಬೆಳೆಸಿದರೆ, ಗೋಮಾತೆ, ಮನುಷ್ಯನ ಕೊನೆಯ ಉಸಿರು ಇರುವವರೆಗೂ ಹಾಲು ನೀಡಿ ಪೋಷಿಸುತ್ತದೆ. ಗೋವುಗಳ ಮಹತ್ವವನ್ನು ನಾಡಿನ ಜನತೆಗೆ ತಿಳಿಸುವ ಉದ್ದೇಶದಿಂದ ಬಿಸನಳ್ಳಿ ಕಾಶಿ ಶಾಖಾಮಠದಲ್ಲಿ ಗೋ ಶಾಲೆ ತೆರೆಯಲಾಗಿದೆ ಎಂದರು.

ಕಾಶಿ ಶಾಖಾಮಠದ ಗೋಶಾಲೆಗೆ ಭಕ್ತ ಸಮೂಹ ಗೋವು, ಹೊಟ್ಟು, ಮೇವು ದಾನ ಮಾಡಬಹುದು. ಗೋಶಾಲೆಯನ್ನು ಮಾದರಿ ಮಾಡುವ ಗುರಿಯನ್ನು ಮಠ ಹೊಂದಿದೆ ಎಂದರು.

ಶ್ರೀಶೈಲ ಹಿರೇಮಠ, ಮುರಗೇಶ ಆಜೂರ, ಗುರುಶಾಂತಪ್ಪ ನರೇಗಲ್, ಗಂಗಾಧರ ಬಡ್ಡಿ, ಗದಿಗೆಪ್ಪ ಮಾಮ್ಲೆಪಟ್ಟಣಶೆಟ್ಟರ, ಅನಿಲ ಸಾಲಿಮಠ, ಸಾಗರ ಕುರವತ್ತಿಮಠ ಹಾಗೂ ಶಾಖಾ ಮಠದ ವಟುಗಳು ಉಪಸ್ಥಿತರಿದ್ದರು.