ವಿಜಯಪುರ ಜಿಲ್ಲಾಸ್ಪತ್ರೆಯ ಎಂಸಿಎಚ್ ವಿಭಾಗದಲ್ಲಿ ಸ್ಥಾಪಿಸಲಾದ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ನಿರ್ವಹಣಾ ಕೇಂದ್ರ ಹಾಗೂ ಮದರ್ ಮಿಲಕ್ ಬ್ಯಾಂಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ, ಡಾ. ಜಲೀಲಂ ತಪ್ಪಸ್ಸೆ ಮತ್ತಿತರರಿದ್ದಾರೆ.  
ಜಿಲ್ಲೆ

ಮದರ್ ಮಿಲ್ಕ್ ಬ್ಯಾಂಕ್‌ಗೆ ಚಾಲನೆ, ನವಜಾತ ಶಿಶುಗಳಿಗೆ ‘ಧಾತ್ರಿ’ ಸಹಕಾರಿ ಎಂದ ಸಚಿವ ಡಾ.ಎಂ.ಬಿ.ಪಾಟೀಲ

ವಿಜಯಪುರ: ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲಾಗಿದ್ದು, ಅವಧಿ ಪೂರ್ವ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಮಕ್ಕಳ ಆರೋಗ್ಯ ವೃದ್ಧಿಗೆ ಈ ಕೇಂದ್ರ ಅತ್ಯಂತ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ಶನಿವಾರ ಜಿಲ್ಲಾಸ್ಪತ್ರೆಯ ಎಂಸಿಎಚ್ ವಿಭಾಗದಲ್ಲಿ ಶನಿವಾರ ಆಶ್ರಯ ಹಸ್ತ ಫೌಂಡೇಶನ್‌ನ 2.60 ಕೋಟಿ ರೂ. ಸಿಎಸ್‌ಆರ್ ಅನುದಾನದಲ್ಲಿ ಸ್ಥಾಪಿಸಲಾದ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ನಿರ್ವಹಣಾ ಕೇಂದ್ರ ಹಾಗೂ ಮದರ್ ಮಿಲಕ್ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮಗುವಿಗೆ ತಾಯಿ ಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಸ್ಥಾಪಿಸಲಾದ ಈ ಹಾಲುಣಿಸುವಿಕೆ ನಿರ್ವಹಣಾ ಕೇಂದ್ರವನ್ನು ಹೈದ್ರಾಬಾದ್‌ನ ಸುಶೇನಾ ಹೆಲ್ಥ್ ಫೌಂಡೇಶನ್ ನಿರ್ವಹಣೆ ಮಾಡಲಿದೆ. ಹಾಲು ಪಚನ ಕ್ರೀಯೆಯಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ ಈ ಹಾಲು ಅತ್ಯಂತ ಪ್ರಯೋಜನಕಾರಿಯಾಗಿದೆ. ವೆಚ್ಚವಿಲ್ಲದೆಯೆ ನವಜಾತ ಶಿಶುಗಳಲ್ಲಿ ತೂಕ ಹೆಚ್ಚಿಸುವುದು ಮತ್ತು ಅಪೌಷ್ಠಿಕತೆಯನ್ನು ನಿಯಂತ್ರಿಸಲು ಈ ಕೇಂದ್ರದಲ್ಲಿ ಸಂಗ್ರಹಿಸಲಾದ ಹಾಲು ನವಜಾತ ಶಿಶುಗಳಿಗೆ ತುಂಬಾ ಉಪಯುಕ್ತವಾಗಿದ್ದು, ಕಡಿಮೆ ತೂಕದ ಶಿಶುಗಳು ಜನಿಸಿದಲ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾದ ನವಜಾತ ಶಿಶುಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಪ್ರತಿ ಮಗುವಿಗೆ ತಾಯಿ ಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದಕ್ಕೆ ಜಿಲ್ಲಾಸ್ಪತ್ರೆಯ ಕಾರ್ಯಕ್ಕೆ ಅಭಿನಂದಿಸಿದ ಅವರು, ತಾಯಿ ಎದೆಹಾಲು ಶ್ರೇಷ್ಠವಾದದ್ದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯವಶ್ಯಕವಾಗಿದ್ದು, ಮಕ್ಕಳ ಬೆಳವಣಿಗೆಗೆ ತಾಯಿ ಹಾಲು ಶಕ್ತಿ ನೀಡಲಿದ್ದು, ಈ ಕೇಂದ್ರ ಸ್ಥಾಪನೆಯಿಂದ ಶಿಶುಗಳ ಆರೋಗ್ಯವೃದ್ದಿಗೆ ಸಹಕಾರಿಯಾಗಲಿದೆ. ಈ ಕುರಿತು ಆಶಾ ಕಾರ್ಯಕರ್ತೆಯರು ಸೂಕ್ತ-ಜಾಗೃತಿ ತಿಳಿವಳಿಕೆ ಮೂಡಿಸಬೇಕು ಎಂದು ಅವರು ಹೇಳಿದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ, ಯುನಿಸೆಫ್‌ನ ದಕ್ಷಿಣ ಭಾರತದ ಮುಖ್ಯ ಕ್ಷೇತ್ರಾಧಿಕಾರಿ ಡಾ. ಜಲೀಲಂ ತಪ್ಪಸ್ಸೆ, ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ನಿರ್ದೇಶಕ ನಂದಕಿಶೋರ ಶರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್‌ಕುಮಾರ ಗುಣಾರಿ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮತ್ತಿತರರಿದ್ದರು.