ಜಿಲ್ಲೆ

ಬ್ರಿಟನ್ ಸಂಸತ್ತಿನಲ್ಲಿ ಮಾತೃಭಾಷಾ ದಿನಾಚರಣೆ; ಕನ್ನಡ ಮತ್ತು ತುಳು ಕವನ ವಾಚನ

ಲಂಡನ್: 25ನೇ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಲಂಡನ್‌ನ ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಬ್ಯಾರೋನೇಸ್ ಗಾರ್ಡನ್ ಆತಿಥ್ಯದಲ್ಲಿ, ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ 25 ಭಾಷೆಗಳ ವಿಶೇಷತೆಗಳನ್ನು ಕವನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಅನಾವರಣಗೊಳಿಸಲಾಯಿತು.

ವಿವಿಧ ಕ್ಷೇತ್ರದ ಹವ್ಯಾಸಿ ಬರಹಗಾರರು ಮಾತೃಭಾಷೆಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಈ ಎಲ್ಲಾ ಕವನಗಳ ಸಂಗ್ರಹವನ್ನು ಒಳಗೊಂಡ ರೈಮ್ ಆ್ಯಂಡ್ ರೆಸೊನಾನ್ಸ್ ಎಂಬ ಪುಸ್ತಕವನ್ನು ಇದೇವೇಳೆ ಬಿಡುಗಡೆ ಮಾಡಲಾಯಿತು.

ಭೂತಾನ್‌ನ ಗೌರವ ಕೌನ್ಸುಲ್ ಆಂಡ್ರೂ ಸಟನ್ ಮತ್ತು ಲಂಡನ್ ವಿಶ್ವವಿದ್ಯಾನಿಲಯದ ಕ್ಷೇತ್ರ ಭಾಷಾಶಾಸ್ತ್ರದಲ್ಲಿ ಎಮಿರಿಟಸ್ ಪ್ರೊಫೆಸರ್ ಪೀಟರ್ ಆಸ್ಟಿನ್ ಮಾತನಾಡಿದರು. ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದು ವಿಶೇಷವಾಗಿತ್ತು. ಭಾರತದ ಮತ್ತಿತರ ಭಾಷಿಗರು ಕೂಡ ಕವನ ವಾಚಿಸಿದರು. ಸಂಸ್ಕೃತ ಕಾವ್ಯಕ್ಕೆ ಶಾಸ್ತ್ರೀಯ ನೃತ್ಯ ಪ್ರದರ್ಶನ, ಹಿಂದಿ ಕವನಕ್ಕೆ ಜನಪದ ನೃತ್ಯ ಪ್ರದರ್ಶಿಸಲಾಯಿತು.

ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್ ದಕ್ಷಿಣ ಏಷ್ಯಾ ಮತ್ತು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.