ಜಿಲ್ಲೆ

ರಕ್ತದ ಗುಂಪು ಅದಲು ಬದಲಾಗಿ ಬಾಣಂತಿ ಸಾವು

ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ |  ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಪಟ್ಟು

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನೀಡಿದ ರಕ್ತದ ಗುಂಪು ಅದಲು ಬದಲಾದ ಕಾರಣ ಬಾಣಂತಿ ಮೃತಪಟ್ಟಿದ್ದಾರೆಂದು ಆರೋಪಿಸಿ ಕುಟುಂಬಸ್ಥರು ನಗರದ ಸಾರ್ವಜನಿಕ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟಿಸಿದರು.

ತಾಲೂಕಿನ ಪುಲಗಾನಹಳ್ಳಿಯ ಭಾಗ್ಯಮ್ಮ(30) ಮೃತೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಸಮೀಪದ ಅಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಹಿಳೆ ವಿಪರೀತ ಕೆಮ್ಮು, ಜ್ವರ, ನೆಗಡಿಯಿಂದ ಬಳಲುತ್ತಿದ್ದರು. ಸೋಮವಾರ ಹೆರಿಗೆ ನೋವು ಹೆಚ್ಚಾದ್ದರಿಂದ ಮಧ್ಯರಾತ್ರಿ 1 ಗಂಟೆ ನಂತರ ಸಿಸೇರಿಯನ್​ ಮೂಲಕ ಹೆರಿಗೆ ಮಾಡಿಸಲಾಗಿದೆ.

ಅಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾಗ ಆಕೆಯ ರಕ್ತದ ಗುಂಪು ಬಿ ಪಾಸಿಟಿವ್​ ಎಂದು ದಾಖಲಿಸಲಾಗಿತ್ತು. ಆದರೆ ಇಲ್ಲಿ ಸಿಸೇರಿಯನ್​ ಮಾಡಿದ ಬಳಿಕ ರಕ್ತ ಸ್ರಾವ ಹೆಚ್ಚಾದಾಗ ಮತ್ತೆ ಆಕೆಯ ರಕ್ತ ಮರುಪರೀೆ ಮಾಡಿದಾಗ ಆಕೆಯ ರಕ್ತದ ಗುಂಪು ಬಿ ನೆಗೆಟಿವ್​ ಎಂದು ಕಂಡು ಬಂದಿದೆ. ಆದರೆ, ಒ ನೆಗೆಟಿವ್​ ಹೊಂದಾಣಿಕೆಯಾಗಲಿದೆ ಎಂದು ರಕ್ತ ನೀಡಿದ್ದಾರೆ. ಬಿ ನೆಗೆಟಿವ್​ ರಕ್ತ ದಾಸ್ತಾನು ಇಲ್ಲದ ಕಾರಣ ಕ್ರಾಸ್​ ಮ್ಯಾಚ್​ ಮಾಡಿ ಒ ನೆಗೆಟಿವ್​ ರಕ್ತ ನೀಡಲಾಗಿದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಬಿ ನೆಗೆಟಿವ್​ ರಕ್ತ ನೀಡಿ ಚಿಕಿತ್ಸೆ ಮುಂದುವರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.

ಕುಟುಂಬಸ್ಥರ ಪ್ರತಿಭಟನೆ

ಸಾವಿನಿಂದ ಕುಪಿತಗೊಂಡ ಕುಟುಂಬಸ್ಥರು ಮಹಿಳೆ ಶವವನ್ನು ಬೆಂಗಳೂರಿನಿಂದ ತಂದು ನಗರದ ಸಾರ್ವಜನಿಕ ಆಸ್ಪತ್ರೆ ಮುಂದೆ ಇಟ್ಟು ಪ್ರತಿಭಟಿಸಿದರು. ರಕ್ತದ ಗುಂಪು ಏಕಾಏಕಿ ಬದಲಾಗಲು ಹೇಗೆ ಸಾಧ್ಯ. ಆದರೆ ಆಸ್ಪತ್ರೆಯ ಸಿಬ್ಬಂದಿ ರ್ನಿಲಕ್ಷ$್ಯ ಬಡ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಂತೋಷ್​ ಬಾಬು ಮನವಿ ಸ್ವೀಕರಿಸಿ, ಈ ಬಗ್ಗೆ ಸಮಿತಿ ಸಭೆ ನಡೆಸಿ ಹಾಗೂ ಮರಣೋತ್ತರ ವರದಿ ಆಧಾರದ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮೃತ ಮಹಿಳೆ ಪತಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್​ ಪಡೆಯಲಾಯಿತು.

ಬಿ ಪಾಸಿಟಿವ್​ ಇದ್ದ ರಕ್ತದ ಗುಂಪು ಏಕಾಏಕಿ ಬಿ ನೆಗೆಟಿವ್​ ಎಂದು ಬಂದಿದೆ. ನಮ್ಮಲ್ಲಿ ಆ ರಕ್ತದ ಗುಂಪು ಲಭ್ಯವಿರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಕ್ರಾಸ್​ ಮ್ಯಾಚ್​ ಮಾಡಿ ಮಹಿಳೆಗೆ ಒ ನೆಗೆಟಿವ್​ ರಕ್ತ ನೀಡಿದ್ದೆವು. ಆದರೂ ರಕ್ತ ಸ್ರಾವ ನಿಲ್ಲದೆ ಇದ್ದಾಗ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಕಳಿಸಿಕೊಟ್ಟೆವು, ಅಲ್ಲಿಯೂ ಬಿ ನೆಗೆಟಿವ್​ ಎಂದು ಬಂದಿದೆ. ಆದರೆ ಅಲ್ಲಿ ಬಾಣಂತಿ ಮೃತಪಟ್ಟಿದ್ದಾರೆ. ಬಿ ನೆಗೆಟಿವ್​ ರಕ್ತ ಲಭ್ಯವಿದ್ದಿದ್ದರೆ ಮಹಿಳೆ ಉಳಿಸಬಹುದಿತ್ತು. ಇದು ಯಾವ ಪ್ರಯೋಗಾಲಯದ ಸಮಸ್ಯೆ ಎಂದು ತನಿಖೆ ಮೂಲಕ ತಿಳಿಯಬೇಕಾಗಿದೆ.

|  ಡಾ.ಶ್ವೇತಾ ವೈದ್ಯಾಧಿಕಾರಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ