ಜಿಲ್ಲೆ

ತಾಯಿ-ಮಕ್ಕಳ ಆರೋಗ್ಯಕ್ಕೆ ಕಿಲ್ಕಾರಿ

ಎನ್.ವೆಂಕಟೇಶ್

ಮೊಬೈಲ್‌ನಲ್ಲೇ ನಿಗಾ ಹುಟ್ಟಿದ ಮಗುವಿಗೆ ಲಸಿಕೆ ಹಾಕಿಸುವ ಮಾಹಿತಿ ನೀಡಿಕೆ

ಚಿಕ್ಕಬಳ್ಳಾಪುರ: ನಾನಾ ಕಾರಣಗಳಿಗೆ ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದೊಂದಿಗೆ ಕಿಲ್ಕಾರಿ ಸೇವೆ ಯೋಜನೆಯಡಿ ನಿಗಾ ವಹಿಸುವ ಜತೆಗೆ ಪರಿಹಾರ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳುತ್ತಿದೆ.

ಕೇಂದ್ರದ ಸರ್ಕಾರದ ವಿಶಿಷ್ಟ ಕಾರ್ಯಕ್ರಮದಡಿ ಗರ್ಭಿಣಿ ಹಾಗೂ ಮಗುವಿನ ಆರೋಗ್ಯದ ವಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್‌ಗೆ ತಲುಪಿಸಲಾಗುತ್ತದೆ. ಗರ್ಭಧಾರಣೆಯ 4ನೇ ತಿಂಗಳಿಂದ ಮಗುವಿನ ಜನ್ಮ ದಿನದವರೆಗಿನ ಅವಧಿಯಲ್ಲಿ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್ ಕರೆ ಮಾಡಲಾಗುತ್ತದೆ. ಮಕ್ಕಳಿಗೆ 9 ತಿಂಗಳವರೆಗೆ ಹಾಕಿಸಬೇಕಾದ 12 ಲಸಿಕೆಗಳ ಬಗ್ಗೆ ಮೊದಲೇ ತಿಳಿಸಲಾಗುತ್ತದೆ.

ಯೋಜನೆಯಡಿ ನೋಂದಣಿ

ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಇಲ್ಲವೇ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಧಾರಣೆ ಇಲ್ಲವೇ ಮಗುವಿನ ಜನನದ ಮಾಹಿತಿಯನ್ನು ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಇದನ್ನು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್‌ಗೆ ನಮೂದಿಸಲಾಗುತ್ತದೆ. ಬಳಿಕ ಉಚಿತವಾದ ಕಿಲ್ಕಾರಿ ಕರೆಗಳ ಮೂಲಕ ನಿಗಾ ವಹಿಸಲಾಗುತ್ತದೆ.

ಸಮರ್ಪಕ ಮಾಹಿತಿ ನೀಡಿ

ಗರ್ಭಿಣಿಯರು ಸ್ವಯಂ ಆರೋಗ್ಯ ಮತ್ತು ಮಗುವಿನ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಗೆ ಸಮರ್ಪಕ ಮಾಹಿತಿ ನೀಡಬೇಕು. ಹಲವರು ಆರೋಗ್ಯ ಇಲಾಖೆಯ ಪ್ರೀರೆಕಾರ್ಡೆಡ್ ಕರೆಗಳು ಬಂದಾಗ ಸ್ವೀಕರಿಸುವುದಿಲ್ಲ ಇಲ್ಲವೇ ಸಂಬಂಧಪಡದವರ ಮೊಬೈಲ್ ಸಂಖ್ಯೆ ನೋಂದಾಯಿಸಿರುತ್ತಾರೆ. ಇದರಿಂದ ಸಿಬ್ಬಂದಿ ನಿಗಾ ವಹಿಸಲು, ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅವಕಾಶ ನೀಡಬಾರದು. ಕಿಲ್ಕಾರಿ ಸಂಖ್ಯೆ (01244451660) ಯನ್ನು ಸೇವ್ ವಾಡಿಕೊಳ್ಳಬೇಕು.

"ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಕಿಲ್ಕಾರಿ ಯೋಜನೆಯ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಹೆಸರು ನೋಂದಾಯಿಸಿಕೊಳ್ಳುವಲ್ಲಿ, ಮಾಹಿತಿ ಪಡೆಯುವಲ್ಲಿ ಗೊಂದಲ ಉಂಟಾದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 14423ಕ್ಕೆ ಕರೆ ವಾಡಬಹುದು. ವಿವರಗಳಿಗೆ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅನ್ನು ಸಂಪರ್ಕಿಸಬಹುದು." - ಡಾ ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಿಕ್ಕಬಳ್ಳಾಪುರ