ಬ್ಯಾಡಗಿ: ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುಮೋದನೆ ಪಡೆದು, ಠರಾವು ಮಾಡುತ್ತಿಲ್ಲ ಎಂದು ನಾಲ್ವರು ಮಹಿಳಾ ಕಾರ್ವಿುಕರು ತಾಲೂಕಿನ ಮೋಟೆಬೆನ್ನೂರು ಪಂಚಾಯಿತಿ ಆವರಣದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಮಹದೇವ ಮೈಲಾರ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿಗೆ ಸೇರಿದ ನಾಲ್ವರು ಮಹಿಳಾ ಕಾರ್ವಿುಕರು ತಮ್ಮ ಪತಿ ಹಾಗೂ ತಂದೆ ತೀರಿಹೋದ ಪರಿಣಾಮ ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಏಳೆಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇವರ ಸೇವೆಯನ್ನು ಪರಿಗಣಿಸಿ ಠರಾವು ಮಾಡಿ ಜಿಪಂ ಕಚೇರಿಗೆ ಕಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಕಾರ್ವಿುಕರನ್ನು ದಿನಗೂಲಿಯನ್ನಾಗಿ ನೇಮಿಸಿಕೊಂಡಲ್ಲಿ ಅವರಿಗೆ ಕನಿಷ್ಠ ವೇತನ 18,240 ರೂ.ಗಳನ್ನು ನೀಡಬೇಕಿದೆ. ಆದರೆ, ಇಲ್ಲಿನ ಪಂಚಾಯಿತಿಯಲ್ಲಿ ಕೇವಲ 5ರಿಂದ 6 ಸಾ.ರೂ. ಅಲ್ಪ ವೇತನ ನೀಡಲಾಗುತ್ತಿದೆ. ಸರ್ಕಾರದ ವೇತನವನ್ನು ಕಾರ್ವಿುಕರಿಗೆ ಖಾತೆಗೆ ಜಮೆ ಮಾಡದೆ, ನಗದು ನೀಡುವ ಮೂಲಕ ಅವ್ಯವಹಾರಕ್ಕೆ ಆಸ್ಪದ ನೀಡಲಾಗಿದೆ. ಯಾವುದೇ ಆರೋಗ್ಯ, ಸೇವಾ ಭದ್ರತೆಗಳು ಇವರಿಗೆ ಇಲ್ಲವಾಗಿವೆ.
ಗ್ರಾಪಂ ಕಚೇರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ನೌಕರಿ ನೀಡಬೇಕೆಂಬ ಆದೇಶವಿದೆ. ಅಲ್ಲದೆ, ಪಂಚಾಯಿತಿ ನೌಕರರ ಯಜಮಾನರು ಮೃತಪಟ್ಟಲ್ಲಿ ಕುಟುಂಬದವರಿಗೆ ಅನುಮೋದನೆ ಪರಿಗಣಿಸದೆ ನೌಕರಿಗೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ, ಗುತ್ತಿಗೆ ಇತರೆ ಕಾರ್ವಿುಕರ ಸೇವೆಯನ್ನು ಪರಿಗಣಿಸಿ ಠರಾವು ಮಾಡಿ ಪಟ್ಟಿ ಕಳಿಸಿಕೊಡಲು ನಿರ್ದೇಶನವಿದ್ದು, ಕೂಡಲೇ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಫಕೀರೇಶ ಮರಿಯಮ್ಮನವರ, ಕಾರ್ವಿುಕರಾದ ಗಂಗಮ್ಮ ಬಸವರಾಜ ಮಲ್ಲಾಡದ, ನೇತ್ರಾ ಕರಿಯಪ್ಪ ಬೂಸಮ್ಮನವರ, ಭೀಮವ್ವ ವಿಜಯಕುಮಾರ ಕುರುಡಮ್ಮನವರ, ಗಂಗಮ್ಮ ಕುರುಡಮ್ಮನವರ ಇದ್ದರು.
ಜಿಲ್ಲೆಯ ವಿವಿಧ ಪಂಚಾಯಿತಿಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಠರಾವು ಬರೆದುಕೊಡುತ್ತಿಲ್ಲ. ಇವರಲ್ಲಿ ಬಹುತೇಕ ಕಾರ್ವಿುಕರು ಎಸ್ಸಿ ಜನಾಂಗಕ್ಕೆ ಸೇರಿದ್ದು, ಅಧಿಕಾರಿಗಳಿಂದಲೇ ಅನ್ಯಾಯವಾಗುತ್ತಿದೆ. ಮೋಟೆಬೆನ್ನೂರು ಕಾರ್ವಿುಕರಿಗೆ ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿ, ಸಿಇಒ ಕಚೇರಿ ಬಳಿ ಹೋರಾಟ ನಡೆಸುತ್ತೇವೆ. | ಸುಭಾಸ ಸೊಟ್ಟಪ್ಪನವರ, ಸಿಐಟಿಇ ಸಂಘಟನೆ ಜಿಲ್ಲಾ ಖಜಾಂಚಿ