ಜಿಲ್ಲೆ

ಮೋಟಗಿಮಠದ ಕೊಡುಗೆ ಅಪಾರ

ಪ್ರಶಾಂತ ಹೂಗಾರ

ಅಥಣಿ: ನದಿ ಇಂಗಳಗಾವಿ ಗ್ರಾಮದ ಭಾಗೋಜಿಮಠ ಮನೆತನದ ಮೂವರು ಪೂಜ್ಯರು ಅಥಣಿಯನ್ನು ಪುಣ್ಯಭೂಮಿಯನ್ನಾಗಿ ಮಾಡಿದ್ದಾರೆ. ಅವರು ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳು, ಮೋಟಗಿಮಠದ ಚನ್ನಬಸವ ಶಿವಯೋಗಿಗಳು, ಗೋಟಖಿಂಡಿಮಠದ ಮಹಾಂತ ಶಿವಯೋಗಿಗಳು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಮೋಟಗಿಮಠದ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಸಂಗೀತ ಸೌರಭ ಮತ್ತು ನಾಟಕೋತ್ಸವ ಸಮಾರೋಪದಲ್ಲಿ ಮಾತನಾಡಿದರು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮೋಟಗಿಮಠದ ಕೊಡುಗೆ ಅಪಾರ. ಶ್ರೀಗಳು ಆಧುನಿಕ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.

ಮಾಜಿ ಸಚಿವೆ ಲೀಲಾದೇವಿ ಪ್ರಸಾದ ಮಾತನಾಡಿ, ಅಥಣಿ ಕ್ಷೇತ್ರ ಶಿವಯೋಗದ ಶಿಖರ. ಇಲ್ಲಿ ಸೇವೆ ಮಾಡಿದ್ದರಿಂದಲೇ ನಾನು ಎರಡು ಬಾರಿ ಶಾಸಕಿಯಾಗಿ, ಸಚಿವೆಯಾಗಿ ಸೇವೆ ಸಲ್ಲಿಸುವ ಭಾಗ್ಯ ದೊರೆತಿದೆ ಎಂದು ಹೆಮ್ಮೆಪಟ್ಟರು.

ಸಾನ್ನಿಧ್ಯವಹಿಸಿದ್ದ ಕೂಡಲಸಂಗಮ ಪಂಚಮಸಾಲಿಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜನಪರ-ಸಮಾಜಮುಖಿ ಕಾಯಕವನ್ನು ಬಸವಾದಿ ಶಿವಶರಣರು ಮಾಡಿದ್ದಾರೆ. ಅದರಂತೆ ನಡೆದ ಮೋಟಗಿಮಠದ ಶ್ರೀಗಳು ನಮಗೆ ಮಾದರಿಯಾಗಿದ್ದಾರೆ ಎಂದು ಹೊಗಳಿದರು.

ಸಾಹಿತಿ ಅಶೋಕ ನರೋಡೆ ಮಾತನಾಡಿದರು. ಉಡುಪಿಯ ಗಾಯಕಿ ಕಲಾವತಿ ದಯಾನಂದ ಬಸವಣ್ಣ, ಬೆಳಗಾವಿ ನಾಗನೂರಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶರಶ್ಚಂದ್ರ ಸ್ವಾಮೀಜಿ, ಬಸವಮರುಳಸಿದ್ದ ಸ್ವಾಮೀಜಿ, ಮಹಾಂತ ಸಿದ್ದೇಶ್ವರ ಸ್ವಾಮೀಜಿ ಇತರರಿದ್ದರು.