ಕಾರವಾರ: ಗೋವಾ ಜೈಲಿನಿಂದ ಪರಾರಿಯಾಗಿ ಕೇರಳ ಎರ್ನಾಕುಲಂನಲ್ಲಿ ಸೋಮವಾರ ಬಂಧನಕ್ಕೊಳಗಾಗಿರುವ (Most Wanted Criminal) ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸುಲೇಮಾನ್ ಖಾನ್ ಕಾರವಾರದಲ್ಲಿ ವಾಸವಿದ್ದು, ತನ್ನ ವ್ಯವಹಾರ ನಡೆಸುತ್ತಿದ್ದ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ನಗರದ ಕೋಡಿಬಾಗದ ಅಬಕಾರಿ ಇಲಾಖೆ ಕಚೇರಿಯ ಪಕ್ಕದ ಮಿಡ್‌ಮ್ಯಾಕ್ ಆರ್ಕಿಡ್ ಅಪಾರ್ಟ್ಮೆಂಟ್‌ನಲ್ಲಿ ಆತ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದು, ಇಲ್ಲಿ ನಿರ್ಮಾಣ ಹಾಗೂ ಲ್ಯಾಂಡ್‌ಲಿಂಕ್ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಸೋಮವಾರ ಆತನಿಗೆ ಸೇರಿರುವ ನಾಲ್ಕು ಫ್ಲಾಟ್‌ಗಳನ್ನು ಸೀಜ್ ಮಾಡಿರುವ ಗೋವಾ ಕ್ರ ಬ್ರಾಂಚ್‌ನ ಪೊಲೀಸರು ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಆತನ ಪತ್ನಿ ಅಪ್ಸಾನಾ ಹೆಸರಿನಲ್ಲಿ ನಾಲ್ಕು ಫ್ಲಾಟ್‌ಗಳಿದ್ದವು.
ಅವುಗಳಲ್ಲಿ ಕಳೆದ ಒಂದು ವಾರದಿಂದ ಹುಡುಕಾಟ ನಡೆಸಿದ ಗೋವಾ ಪೊಲೀಸರು ಕಾರವಾರದ ಅಪಾರ್ಟ್ಮೆಂಟ್‌ನಿಂದ 16 ಪಾಸ್‌ಬುಕ್, 30 ಚೆಕ್ ಬುಕ್, ಹಲವು ಆಧಾರ ಕಾರ್ಡ್ಗಳು, ರೇಶನ್ ಕಾರ್ಡ್ಗಳು ಸೇರಿ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೋವಾ ಕ್ರೈಂ ಬ್ರಾಂಚ್‌ನ ಎಸ್‌ಪಿ ರಾಹುಲ್ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುಲೇಮಾನ್ ಖಾನ್ ಮೂಲತಃ ಶಿವಮೊಗ್ಗದವ. ಕಳೆದ ಐದು ವರ್ಷಗಳಿಂದ ಕಾರವಾರದಲ್ಲಿ ವಾಸವಿದ್ದು, ಸಿದ್ದಿಕಿ ಎಂಬ ಹೆಸರಿನಲ್ಲಿ ಪ್ರಸಿದ್ಧನಾಗಿದ್ದ. ಗೋವಾದಲ್ಲಿ ಲ್ಯಾಂಡ್ ಡೀಲಿಂಗ್ ವ್ಯವಹಾರ ನಡೆಸುತ್ತಿದ್ದ . ಭೂಗತ ಲೋಕದ ಖದೀಮರ ಸಂಪರ್ಕ ಇಟ್ಟುಕೊಂಡು, ಅವರ ಸಹಾಯದಿಂದ ಮಾಲೀಕರಿಗೆ ಬೆದರಿಕೆ ಹಾಕಿ, ಬೆಲೆಬಾಳುವ ಜಮೀನುಗಳನ್ನು ಕಬ್ಜಾ ಮಾಡಿ ದಂಧೆ ನಡೆಸುತ್ತಿದ್ದ. ಆತನ ವಿರುದ್ಧ ಗೋವಾ, ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಆತನ ಪತ್ನಿ ಪತ್ನಿ ಅಪ್ಸಾನಾ ವಿರುದ್ಧವೂ ಗೋವಾದಲ್ಲಿ ಪ್ರಕರಣ ದಾಖಲಾಗಿದೆ. ಸಾರಿಕಾ ಖಾನ್ ಹೆಸರಿನಲ್ಲಿಯೂ ಆಕೆ ಗುರುತಿಸಿಕೊಂಡಿದ್ದಳು.
ಗೋವಾದ ಮಾಪುಸಾ ಪೊಲೀಸ್ ಠಾಣೆಯಲ್ಲಿ ಸುಲೇಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಽಸಲಾಗಿತ್ತು. ಆದರೆ, ಡಿಸೆಂಬರ್ 13 ರಂದು ಆತ ಗೋವಾದ ರಾಯಬಂದರ್ ಜೈಲಿನಿಂದ ಪರಾರಿಯಾಗಿದ್ದ. ಆತನನ್ನು ಹುಡುಕಲು ಗೋವಾ ಪೊಲೀಸರು 14 ತಂಡ ರಚಿಸಿದ್ದರು.
ಸೋಮವಾರ ಆತ ಕೇರಳದಲ್ಲಿ ಸೆರೆಯಾಗಿದ್ದು, ಆತನನ್ನು ಗೋವಾಕ್ಕೆ ಕರೆತರಲಾಗಿದೆ. ಗೋವಾ ಪೊಲೀಸ್ ಸಿಬ್ಬಂದಿ ಅಮಿತ್ ನಾಯ್ಕ ಎಂಬಾತನೇ ಹಣದ ಆಸೆಗಾಗಿ ಸುಲೇಮಾನ್‌ಗೆ ಸಹಕಾರ ಮಾಡಿದ್ದ ಎಂಬುದು ಗೋವಾ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪೊಲೀಸ್ ಸಿಬ್ಬಂದಿ ಅಮಿತ್ ನಾಯ್ಕ ಪೊಲೀಸರಿಗೆ ಶರಣಾಗಿದ್ದು, ಆತನೇ ಸುಲೇಮಾನ್ ಖಾನ್‌ನನ್ನು ಕಾರವಾರ ಹಾಗೂ ಹುಬ್ಬಳ್ಳಿಗೆ ಕರೆದೊಯ್ದಿದ್ದ. ನಂತರ ಸುಲೇಮಾನ್ ಬೆಂಗಳೂರು, ಕೇರಳ ತಲುಪಿದ್ದ.