ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ ಎರಡು ದಿನ ತುಸು ನೆಮ್ಮದಿ ; ಬಹುತೇಕರ ವರದಿ ಕರೊನಾ ನೆಗೆಟಿವ್

ತುಮಕೂರು: ಕೆಂಪು ವಲಯಕ್ಕೆ ಜಾರುವ ಆತಂಕದ ನಡುವೆಯೇ ಸತತ ಎರಡು ದಿನಗಳು ಜಿಲ್ಲೆಯಲ್ಲಿ ಕರೊನಾ ಪಾಸಿಟಿಸ್ ಕೇಸ್ ದಾಖಲಾಗದಿರುವುದು ತುಸು ನೆಮ್ಮದಿ ಮೂಡಿಸಿದೆ.

ಪಾವಗಡ ಹಾಗೂ ಶಿರಾದಲ್ಲಿ ಸೋಂಕಿತರ ಜತೆ ಸಂಪರ್ಕದಲ್ಲಿದ್ದವರ ಮಾದರಿಯನ್ನು ಸಂಗ್ರಹಿಸಲಾಗಿದ್ದು ಬಹುತೇಕರ ವರದಿ ನೆಗೆಟಿವ್ ಬಂದಿರುವುದು ಆಶಾಭಾವನೆ ಮೂಡಿಸಿದೆ. ಹೊರ ರಾಜ್ಯದಿಂದ ಬಂದವರನ್ನು ಜಿಲ್ಲೆಯ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು ಸ್ಥಳೀಯರು ವಿರೋಧ ಮಾಡಲಾರಂಭಿಸಿದ್ದಾರೆ. ಸ್ಥಳೀಯರ ವಿರೋಧದ ನಡುವೆಯೂ ಪಾವಗಡ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾದ ತಬ್ಲಿಘಿಗಳಲ್ಲಿ ಸೋಂಕು ಪತ್ತೆಯಾದ ನಂತರವಂತೂ ಈ ಸಮಸ್ಯೆ ಹೆಚ್ಚಾಗಿದೆ.

ತುಮಕೂರು ನಗರದಲ್ಲಿ ಸಂಚಾರ ಸಹಜ ಸ್ಥಿತಿಗೆ ಬಂದಂತೆ ಕಾಣುತ್ತಿದೆ, ರಸ್ತೆಗಳಲ್ಲಿಯೂ ಲಾಕ್‌ಡೌನ್ ಪೂರ್ವದಲ್ಲಿ ಕಾಣಿಸುತ್ತಿದ್ದ ವಾಹನದಟ್ಟಣೆ ಕಾಣಲಾರಂಭಿಸಿದೆ. ದ್ವಿಚಕ್ರವಾಹನಗಳು, ಕಾರುಗಳು ಹೆಚ್ಚಾಗಿ ರಸ್ತೆಗಳಿದಿವೆ. ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಇಲ್ಲದಿರುವ ಕಾರಣಕ್ಕೆ ಆಟೋ, ನಗರಸಾರಿಗೆ ಮಾತ್ರ ಕೊರತೆಯಿದೆ.

ನಗರದ ಎಂಜಿ ರಸ್ತೆ ಸೇರಿ ಬಹುತೇಕ ವಾಣಿಜ್ಯ ವಹಿವಾಟು ನಡೆಸುತ್ತಿದ್ದ ರಸ್ತೆಗಳೆಲ್ಲವೂ ನಿಧಾನವಾಗಿ ಟೇಕಾಫ್ ಆಗುತ್ತಿವೆ. ವ್ಯಾಪಾರ ವಹಿವಾಟು ಕಡಿಮೆ ಪ್ರಮಾಣದಲ್ಲಾದರೂ ಜನಸಂದಣಿ ಸಹಜ ಸ್ಥಿತಿಗೆ ಮರಳುತ್ತಿದೆ. ತುಮಕೂರು ನಗರದ ಕೋವಿಡ್ 19 ಆಸ್ಪತ್ರೆಯಲ್ಲಿ ಸೋಂಕಿತ ಆರೈಕೆಗಾಗಿ ಆರಂಭಿಸಲಾಗಿರುವ 20 ಹಾಸಿಗೆಗಳ ಐಸಿಯು ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಚಾಲನೆ ನೀಡಿದರು.

ಸೋಂಕು ನಿಯಂತ್ರಿಸಲು ಕಾನೂನು ಒಂದೇ ಸಾಲದು, ನಾಗರಿಕರು ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಪಿಡುಗಿನ ವಿರುದ್ಧ ಹೋರಾಡಬೇಕು, ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಬಂದಿಲ್ಲ, ಆದರೆ, ಹೊರಗಡೆಯಿಂದ ಆಗಮಿಸದವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಅವರ ಜತೆ ಸಂಪರ್ಕದಲ್ಲಿದ್ದವರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಿಎಚ್‌ಒ ಡಾ.ನಾಗೇಂದ್ರಪ್ಪ

ಮತ್ತಿತರರು ಇದ್ದರು.