ಜಿಲ್ಲೆ

ಪಶು ಇಲಾಖೆ ಬಹುತೇಕ ಹುದ್ದೆ ಖಾಲಿ

ರಟ್ಟಿಹಳ್ಳಿ: ತಾಲೂಕು ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಬಹುತೇಕ ಹುದ್ದೆಗಳು ಖಾಲಿ ಇದ್ದು, ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ರೈತರಿಗೆ ಯೋಜನೆಗಳ ಸೌಲಭ್ಯ ಸಿಗದಂತಾಗಿದೆ.

ತಾಲೂಕಿನಲ್ಲಿ ದನಗಳು 21,105, ಎಮ್ಮೆಗಳು 8,638, ಕುರಿಗಳು 17,635 ಮತ್ತು ಮೇಕೆಗಳು 12,240 ಇವೆ. ತಾಲೂಕು ಕೇಂದ್ರದಲ್ಲಿ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಪಶು ಆಸ್ಪತ್ರೆ, 8 ಪಶು ಚಿಕಿತ್ಸಾಲಯ, 10 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. ಸಹಾಯಕ ನಿರ್ದೇಶಕರ ಹುದ್ದೆ ಸೇರಿದಂತೆ ಸರ್ಕಾರದಿಂದ ಒಟ್ಟು 69 ಹುದ್ದೆಗಳು ಮಂಜೂರಾಗಿವೆ.

ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿ ಇದ್ದು, ಸುಮಾರು ವರ್ಷಗಳಿಂದ ಪ್ರಭಾರಿ ಇದ್ದಾರೆ. ಪಶು ವೈದ್ಯಾಧಿಕಾರಿ ಹುದ್ದೆಗಳ ಪೈಕಿ 8ರಲ್ಲಿ 2 ಖಾಲಿ, ಜಾನುವಾರು ಅಧಿಕಾರಿ 1ರ ಪೈಕಿ 1 ಖಾಲಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆ 12ರ ಪೈಕಿ 11 ಖಾಲಿ, ಪಶು ವೈದ್ಯಕೀಯ ಪರೀಕ್ಷಕರ ಹುದ್ದೆ 7ರಲ್ಲಿ 6 ಖಾಲಿ, ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆ 11ರಲ್ಲಿ 4 ಖಾಲಿ ಮತ್ತು ಡಿ ದರ್ಜೆ ಹುದ್ದೆ 29ರಲ್ಲಿ 27 ಖಾಲಿ ಸೇರಿ ಒಟ್ಟು 69 ಮಂಜೂರಾದ ಹುದ್ದೆಗಳಲ್ಲಿ 17 ಹುದ್ದೆ ಭರ್ತಿ ಇದ್ದು ಉಳಿದಂತೆ 52 ಹುದ್ದೆ ಖಾಲಿ ಇವೆ.

ಪಟ್ಟಣದಲ್ಲಿ ಪಶು ಆಸ್ಪತ್ರೆ, ಹಳ್ಳೂರು, ಮೇದೂರು, ಗುಡ್ಡದಮಾದಪುರ, ತಡಕನಹಳ್ಳಿ, ಮಾಸೂರು, ಕೋಡಮಗ್ಗಿ, ಗುಂಡಗಟ್ಟಿ ಮತ್ತು ಹುಲ್ಲತ್ತಿಯಲ್ಲಿ ಪಶು ಚಿಕಿತ್ಸಾಲಯ ಹಾಗೂ ಹಳ್ಳಿಗಳಲ್ಲಿ 10 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ.

ಪಶು ಆಸ್ಪತ್ರೆ, ಚಿಕಿತ್ಸಾಲಯ, ಚಿಕಿತ್ಸಾ ಕೇಂದ್ರಗಳು ಸುಸ್ಸಜ್ಜಿತ ಕಟ್ಟಡಗಳನ್ನು ಹೊಂದಿವೆ. ಆದರೆ, ಇವುಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿಯೇ ಇಲ್ಲ. ತಾಲೂಕಿನ 63 ಗ್ರಾಮಗಳಲ್ಲಿನ ಜಾನುವಾರುಗಳ, ಕುರಿ-ಮೇಕೆಗಳಿಗೆ ಚಿಕಿತ್ಸೆ, ಲಸಿಕೆ ಹಾಕುವ ಕೆಲಸವನ್ನು ಇರುವ ಸಿಬ್ಬಂದಿಯೇ ಮಾಡಬೇಕಾಗಿದೆ. ವೈದ್ಯರ ಕೊರತೆಯಿಂದಾಗಿ ರೈತರು ತಮ್ಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಗಾಗಿ ದೂರದ ವೈದ್ಯರ ಬರುವಿಕೆಗೆ ಕಾಯುವ ಇಲ್ಲವೇ ಅವರಿದ್ದಲ್ಲಿಗೆ ಜಾನುವಾರು ತೆಗೆದುಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಶೀಘ್ರವೇ ಹುದ್ದೆಗಳನ್ನು ತುಂಬಿ, ಸಕಾಲದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಲಭಿಸುವಂತೆ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಅನುಗ್ರಹ ಪರಿಹಾರ ವಿತರಣೆ ವಿಳಂಬ: ಆಕಸ್ಮಿಕ ಸಾವಿಗೀಡಾಗುವ ಜಾನುವಾರುಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಲಾಗುತ್ತದೆ. 2023ರ ಸೆಪ್ಟೆಂಬರ್‌ನಿಂದ ಪ್ರಸಕ್ತ ಜುಲೈವರೆಗೆ ತಾಲೂಕಿನಲ್ಲಿ 127 ಜಾನುವಾರು ಮರಣ ಹೊಂದಿವೆ. ಇದರಲ್ಲಿ 88 ಪ್ರಕರಣಗಳಿಗೆ ಪರಿಹಾರ ವಿತರಣೆ ಮಾಡಿದ್ದು, 39 ಬಾಕಿಯಿವೆ. 2023ರ ಸೆಪ್ಟೆಂಬರ್‌ನಿಂದ ಪ್ರಸಕ್ತ ಜುಲೈವರೆಗೆ 176 ಮರಣ ಕುರಿ ಮತ್ತು ಮೇಕೆ ಸಾವಿಗೀಡಾಗಿವೆ. ಇದರಲ್ಲಿ 52 ಪ್ರಕರಣಕ್ಕೆ ಪರಿಹಾರ ವಿತರಣೆಯಾಗಿದ್ದು, 124 ಬಾಕಿಯಿವೆ.

ತಾಲೂಕಿನಲ್ಲಿ ಕೊರತೆ ಇರುವ ಪಶು ವೈದ್ಯರು ಮತ್ತು ಇತರ ಸಿಬ್ಬಂದಿ ಸರ್ಕಾರ ಶೀಘ್ರವೇ ನೇಮಕ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಮರಣ ಹೊಂದಿದ ಎಲ್ಲ ಜಾನುವಾರುಗಳ ಫಲಾನುಭವಿಗಳಿಗೆ ಅನುಗ್ರಹ ಯೋಜನೆಯಡಿ ಶೀಘ್ರವೇ ಪರಿಹಾರ ವಿತರಿಸಬೇಕು. ಬಸನಗೌಡ ಗಂಗಪ್ಪನವರ, ರೈತ ಯಡಗೋಡ ಗ್ರಾಮ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಮೇಲಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರಲಾಗಿದೆ. ಬಹುತೇಕ ಹುದ್ದೆ ಖಾಲಿಯಿರುವುದರಿಂದ ಇರುವ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಅಧಿಕವಾಗುತ್ತದೆ. ಡಾ.ರಾಘವೇಂದ್ರ ಎಲಿವಾಳಸಹಾಯಕ ನಿರ್ದೇಶಕ (ಪ್ರಭಾರಿ) ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ರಟ್ಟಿಹಳ್ಳಿ