ಚಿಕ್ಕಮಗಳೂರು: ಮಳೆಯಿಂದ ಮಲೆನಾಡು ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ನಿವಾಸಿಗಳಿಗೆ ಬಹುತೇಕ ಮರುವಿದ್ಯುತ್ ಸಂಪರ್ಕ ಕಲ್ಪಿಸಿ ನಿವಾಸಿಗಳಿಗೆ ಅನುಕೂಲ ಮಾಡಿರುವ ಸಿಬ್ಬಂದಿ ಕೆಲಸಕ್ಕೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ ಮೆಸ್ಕಾಂ ವ್ಯವಸ್ಥಾಪಕರು ಕಡೂರು ಹಾಗೂ ತರೀಕೆರೆ ಭಾಗದ ಮೆಸ್ಕಾಂ ಸಿಬ್ಬಂದಿ ಕರೆತಂದು ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಕ್ಕೆ ಒಳಗಾಗಿರುವ ಲೈನ್‌ಗಳನ್ನು ದುರಸ್ಥಿಗೊಳಿಸಿ ಬಹುತೇಕ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.
ಮಲೆನಾಡು ಭಾಗವಾದ ಮೂಡಿಗೆರೆ, ಕಳಸ, ಕೊಟ್ಟಿಗೆಹಾರ, ಜಾವಳಿ, ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಇದನ್ನರಿತ ವ್ಯವಸ್ಥಾಪಕರು ಮಳೆ ಸ್ವಲ್ಪ ಬಿಡುವು ಕೊಟ್ಟ ನಂತರ ಕಾರ್ಯನಿರ್ವಹಿಸಿದ ಪರಿಣಾಮ ಶೇ.೯೦ಕ್ಕೂ ಪ್ರದೇಶದ ನಿವಾಸಿಗಳಿಗೆ ಮರು ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬಯಲುಸೀಮೆಗಿAತ ಮಲೆನಾಡು ಭಾಗ ಅತ್ಯಂತ ಗುಡ್ಡಗಾಡು ಪ್ರದೇಶಗಳನ್ನು ಹೊಂದಿದೆ. ಮಳೆಯಿಂದ ಪ್ರತಿನಿತ್ಯವು ರಸ್ತೆ ಬದಿಯ ಮರಗಳು ಬಿದ್ದು ವಿದ್ಯುತ್ ಕಂಬಗಳನ್ನು ಧರೆಗುರುಳಿಸಿದ್ದವು. ಈ ಬಗ್ಗೆ ಗ್ರಾಮಸ್ಥರ ನೆರವಿಗೆ ಮೆಸ್ಕಾಂ ಇಲಾಖೆ ಧಾವಿಸಿ ಸಾಂತ್ವಾನ ಹೇಳಿ ತ್ವರಿಗತಿಯಲ್ಲಿ ಗ್ರಾಮದ ಮನೆಗಳಿಗೆ ಬೆಳಕಿನ ಭಾಗ್ಯ ಕರುಣಿಸಿದೆ ಎಂದು ತಿಳಿಸಿದರು.
ಪ್ರತಿವರ್ಷವು ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುವುದು ಸಹಜ. ಈ ನಡುವೆ ಮೆಸ್ಕಾಂ ಸಿಬ್ಬಂದಿ ನಿರ್ವಹಿಸಿದ ಕೆಲಸವನ್ನು ಸ್ಮರಿಸಬೇಕು. ಹೀಗಾಗಿ ಗುಡ್ಡಪ್ರದೇಶದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ ಮೆಸ್ಕಾಂ ಸಿಬ್ಬಂದಿಗಳು ಸೇವೆ ಅವಿಸ್ಮರಣೀಯ ಎಂದು ಹೇಳಿದರು.