ಚಿತ್ರದುರ್ಗ: ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಕೀಟಜನ್ಯ ರೋಗಗಳನ್ನು ನಿಯಂತ್ರಿಸೋಣ ಎಂದು ಜಿಲ್ಲಾ ರೋಗವಾಹಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ, ಶಿಕ್ಷಣ ಇಲಾಖೆಗಳು ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ವಿಶ್ವ ಸೊಳ್ಳೆ ದಿನದ ಅಂಗವಾಗಿ ನಗರದ ಆಶ್ರಯ ಬಡಾವಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ರೋಗಗಳಿಗೆ ಕಾರಣವಾಗುವ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವ ವಿಧಾನಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ಆ.20ನ್ನು ವಿಶ್ವ ಸೊಳ್ಳೆ ದಿನವೆಂದು ಆಚರಿಸಲಾಗುತ್ತದೆ ಎಂದರು.
ನಿಂತ ನೀರಿನಲ್ಲಿ ಮಾತ್ರ ಮೊಟ್ಟೆ ಇಡುವ ಸೊಳ್ಳೆಗಳನ್ನು ನಿಯಂತ್ರಿಸಿದರೆ ಹಲವು ಸಾಂಕ್ರಾಮಿಕ ರೋಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ತೆಂಗಿನ ಚಿಪ್ಪು, ಬಳಸಿದ ಟಯರ್ ಇತ್ಯಾದಿ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಜಾಥಾಕ್ಕೆ ಚಾಲನೆ ನೀಡಿದ ಪ್ರೋಬೇಷನರಿ ತಹಸೀಲ್ದಾರ್ ಆರ್.ಪ್ರತಿಭಾ ಮಾತನಾಡಿ, ಸೊಳ್ಳೆಗಳ ಕಡಿತ ತಪ್ಪಿಸಿಕೊಳ್ಳಲು ಸಂಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು ಎಂದರು.
ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಮಾತನಾಡಿ, ಯಾವುದೇ ಕ್ರಮ ಅನುಸರಿಸಿದರೂ ಸೊಳ್ಳೆಗಳನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವೇ ಇಲ್ಲ. ಆದರೆ, ಅವುಗಳ ಕಡಿತದಿಂದ ಪಾರಾಗಲು ಹಲವು ಉಪಾಯಗಳಿವೆ ಎಂದು ಹೇಳಿದರು.
ತಾಲೂಕು ಅರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್ ರೆಡ್ಡಿ, ಶ್ರೀಧರ್, ಮಲ್ಲಿಕಾರ್ಜುನ್, ನಾಗರಾಜ್, ಮಳಲಿ ಶ್ರೀನಿವಾಸ್, ಡಾ.ಯಶಸ್, ಡಾ.ಸೀಮಾ, ನಗರಸಭೆ ತಾಂತ್ರಿಕ ಅಧಿಕಾರಿ ಜಾಫರ್, ಶಿಕ್ಷಕ ರುದ್ರಪ್ಪ, ಆಶಾ ಕಾರ‌್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.