ಜಿಲ್ಲೆ

ಮೊಸರು ಗಡಿಗೆ ಒಡೆಯುವ ಸ್ಪರ್ಧೆ,  ಆನಂದನಗರ ಗಾರ್ಡನ್ ಬಾಯ್ಸ್ ತಂಡಕ್ಕೆ ಬಹುಮಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಚೈತನ್ಯನಗರ ನಿವಾಸಿಗಳ ಸಂಘ, ಸರಸ್ವತಿ ಮಹಿಳಾ ಮಂಡಳ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಜನಮನ ಸೂರೆಗೊಂಡಿತು.

ಅಕ್ಷಯ ಪಾರ್ಕ್ ಬಳಿಯ ಸಂತೆ ಮೈದಾನದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಹಾಗೂ ಅಕ್ಕಪಕ್ಕದ ತಾಲೂಕಿನ ಆರು ತಂಡಗಳು ಪಾಲ್ಗೊಂಡಿದ್ದವು.

ಕೆಸರುಮಯ ಆಟದ ಅಂಕಣದಲ್ಲಿ ಪ್ರತಿಯೊಂದು ತಂಡದ ಸದಸ್ಯರು ಸುಮಾರು 20- 30 ಅಡಿ ಎತ್ತರದಲ್ಲಿದ್ದ ಗಡಿಗೆ ಒಡೆಯುವ ಸಾಹಸ ಮಾಡಿದರು. ಪ್ರತಿ ತಂಡದ ಪ್ರದರ್ಶನವು ನೋಡುಗರಿಗೆ ರೋಮಾಂಚನ ಉಂಟು ಮಾಡಿತು.

ಬಹಳಷ್ಟು ಸಾಹಸಮಯ ಹಾಗೂ ಕುತೂಹಲ ಮೂಡಿಸಿದ್ದ ಸ್ಪರ್ಧೆಯಲ್ಲಿ ಆನಂದನಗರದ ಗಾರ್ಡನ್ ಬಾಯ್ಸ್ ತಂಡವು ಗಡಿಗೆ ಒಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿತು. ಇವರಿಗೆ 50 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಿ ಸನ್ಮಾನಿಸಲಾಯಿತು.

ತಂಡಗಳು: ಮಾರುತಿನಗರ ಬಾಯ್ಸ್ ಟೀಮ್, ಆನಂದನಗರ ಗಾರ್ಡನ್ ಬಾಯ್ಸ್,
ಜೈ ಕರ್ನಾಟಕ ಮಲ್ಲಗಂಬ ತಂಡ, ಆನಂದ ನಗರ್ ಟೈಗರ್, ಗಾರ್ಡನ್ ಬಾಯ್ಸ್ ಹಾಗೂ ದುರ್ಗಾ ಸಿಸಿ ಟೀಮ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಗೋವಿಂದ ಜೋಶಿ, ಕೃಷ್ಣ ಗಂಡಗಾಳೇಕರ, ಸುಭಾಸಸಿಂಗ್ ಜಮಾದಾರ, ವಿರುಪಾ ಹಿರೇಮಠ, ಸುಧೀರ ಹೊಸಮನಿ, ಗುರುನಾಥ ಮುರಗೋಡ, ಮಲ್ಲಿಕಾರ್ಜುನ ಉಳ್ಳಿ ಇತರರು ಉಪಸ್ಥಿತರಿದ್ದರು.