ಜಿಲ್ಲೆ

ಮಸಣ ಕಾರ್ಮಿಕರ ಪ್ರತಿಭಟನೆ

Bellari - Heera Nayak

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರನ್ನು ಸರ್ವೇ ಮಾಡುವಂತೆ ಒತ್ತಾಯಿಸಿ ಬುಧವಾರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ವಂಶ ಪರಂಪರೆಯಿಂದ ಅನೇಕ ವರ್ಷಗಳಿಂದ ಮಸಣ ಕಾಯುವ ಕೆಲಸ ಮಾಡುತ್ತ ಬಂದಿದ್ದೇವೆ. ಈಗಾಗಲೇ ನಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರುದ್ರಭೂಮಿಯಲ್ಲಿ ಮತ್ತು ವಿದ್ಯುತ್ ಚಿತಾಗಾರದಲ್ಲಿ ಕೆಲಸ ಮಾಡುವ ಮಸಣ ಕಾರ್ಮಿಕರನ್ನು ಸರ್ವೇ ಮಾಡಬೇಕು ಮತ್ತು ಮಸಣಕ್ಕೆ ಒಬ್ಬರನ್ನು ಮಸಣ ನಿರ್ವಾಹಕರನ್ನಾಗಿ ನೇಮಿಸಿಕೊಂಡು ಕನಿಷ್ಟ ಕೂಲಿ ಜಾರಿ ಮಾಡಬೇಕು. ಕುಣಿ ತೆಗೆಯುವ ಮತ್ತು ಮುಚ್ಚುವ ಕೆಲಸಕ್ಕೆ ಕನಿಷ್ಟ 3 ಸಾವಿರ ರೂ. ಹಣವನ್ನು ಸರ್ಕಾರವೇ ನೀಡಬೇಕು ಮತ್ತು ಅಗತ್ಯ ಸಾಮಾನುಗಳನ್ನು ನೀಡಬೇಕು ಮತ್ತು ಸುರಕ್ಷತೆ ಸಾಮಾನುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ರುದ್ರಭೂಮಿಯಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಬೋರ್‌ವೆಲ್ ಹಾಕಬೇಕು ಮತ್ತು ಕೈ ಕಾಲು ತೊಳೆಯುವುದಕ್ಕೆ ನೀರಿನ ತೊಟ್ಟಿಯನ್ನು ನಿರ್ಮಿಸಬೇಕು. ಮಸಣ ಕಾರ್ಮಿಕರಿಗಾಗಿ ಬಟ್ಟೆಗಳನ್ನು ನೀಡಬೇಕು. ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು. 45 ವರ್ಷ ಮೇಲ್ಪಟ್ಟ ಎಲ್ಲ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ ಒದಗಿಸಲು ಕ್ರಮವಹಿಸಬೇಕು. ರುದ್ರಭೂಮಿ ಒತ್ತುವರಿಯಾಗಿರುದನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಎಚ್.ನಾಗರಾಜ್, ರಾಮಾಂಜಿನಿ, ಜಯರಾಮ್, ಹನುಮಂತಪ್ಪ, ಸಕ್ರಪ್ಪ, ವೆಂಕಟೇಶ್, ಹೊನ್ನೂರಸ್ವಾಮಿ ಇನ್ನಿತರರು ಇದ್ದರು.