ಸಿದ್ದಾಪುರ: ಹೆರಿಗೆಯ ನಂತರ ಆರೋಗ್ಯದಲ್ಲಾದ ಏರುಪೇರಿನಿಂದ ಮೃತಪಟ್ಟ ಮಹಿಳೆಯ ಸಾವಿನಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ. ಆದರೆ, ಕೆಲವರಿಗೆ ಶವದ ಮುಂದೆ ರಾಜಕೀಯ ಮಾಡುವುದು ಹವ್ಯಾಸವಾಗಿದೆ. ಸರ್ಕಾರಿ ಆಸ್ಪತ್ರೆ ಎದುರು ನಡೆದ ಪ್ರತಿಭಟನೆ ತಾಲೂಕಿಗೆ ಶೋಭೆತರುವಂತಹುದಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಶನಿವಾರ ಅವರು ಮಾತನಾಡಿದರು. ಹೆರಿಗೆ ತಜ್ಞ ಡಾ. ರವಿರಾಜ ಏಳು ವರ್ಷದಿಂದ ತಾಲೂಕಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನವರೆಗೆ ಸುಮಾರು 5357 ಹೆರಿಗೆಗಳನ್ನು ಮಾಡಿಸಿದ್ದಾರೆ. ಆದರೆ, ಕಳೆದ 10 ದಿನಗಳಲ್ಲಿ ಹೆರಿಗೆಯ ನಂತರ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯಂದ ನಡೆದ ಘಟನೆಯೋ ಅಥವಾ ಆರೋಗ್ಯದ ಏರುಪೇರಿನಿಂದ ಉಂಟಾಗಿದ್ದೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಎಂದರು.
ಸಂವಿಧಾನದಡಿ ಪ್ರತಿಯೊಬ್ಬ ನಾಗರಿಕನಿಗೂ ವಿರೋಧಿಸುವ ಅಥವಾ ಪ್ರತಿಭಟಿಸುವ ಹಕ್ಕಿದೆ. ಆದರೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಭಯದ ವಾತಾವರಣ ಸೃಷ್ಟಿಸಿರುವುದು ಸರಿಯಲ್ಲ. ಈ ಘಟನೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಿದ್ದು, ಉನ್ನತ ಮಟ್ಟದ ಸಮಿತಿ ರಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾತನಾಡಿ, ಹೆರಿಗೆ ಮತ್ತು ಮಕ್ಕಳ ತಜ್ಞ ವೈದ್ಯರ ನೇಮಕಕ್ಕೆ ಪ್ರಯತ್ನಿಸುತ್ತೇನೆ. ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬಕ್ಕೆ ತಲಾ 50 ಸಾವಿರ ರೂ.ಗಳ ವೈಯಕ್ತಿಕ ಸಹಾಯ ನೀಡುತ್ತೇನೆ ಎಂದರು.
ನೊಂದ ಕುಟುಂಬಗಳಿಗೆ ಧೈರ್ಯ ತುಂಬಿ ಸಹಕಾರ ನೀಡುವ ಬದಲು ತಮ್ಮ ರಾಜಕೀಯ ಲಾಭಕ್ಕೋಸ್ಕರ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿರುವುದು ನೋವನ್ನುಂಟು ಮಾಡಿದೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ, ಎಸ್.ಕೆ. ಭಾಗವತ್ ಸಿರಸಿ, ಸಿ.ಆರ್ .ನಾಯ್ಕ, ಬಿ.ಆರ್. ನಾಯ್ಕ, ಇತರರು ಉಪಸ್ಥಿತರಿದ್ದರು.