ಶಿವರಾಜ ಎಂ. ಬೆಂಗಳೂರು
ದೇವನಹಳ್ಳಿ ತಾಲೂಕು ಬೀರಸಂದ್ರದಲ್ಲಿ ಜಿಲ್ಲಾಡಳಿತ ಭವನ ಕಟ್ಟಡವಿದ್ದು ಹೆಚ್ಚುವರಿಯಾಗಿ 8 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಗೊಳ್ಳುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ಅಪಸ್ವರ ಕೇಳಿಬಂದಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಲ್ಲವೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
ಜಿಲ್ಲಾಡಳಿತ ಭವನ ಕಟ್ಟಡ ಕಾರ್ಯಾರಂಭವಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಈಗಿರುವ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಿಸುವಾಗಲೇ ಮೂರು ಅಥವಾ ನಾಲ್ಕು ಅಂತಸ್ತು ನಿರ್ಮಿಸಲು ಯೋಜನೆ ರೂಪಿಸಿದ್ದರೆ ಮತ್ತೆ 8 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚು ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಜಿಲ್ಲಾ ವ್ಯಾಪ್ತಿಗೆ ಎಷ್ಟು ಇಲಾಖೆಗಳು ಸೇರಲಿವೆ, ಎಷ್ಟು ಕೊಠಡಿಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಮೊದಲೇ ನೀಲಿನಕ್ಷೆ ರೂಪಿಸಬೇಕಿತ್ತು. ಸುಮಾರು 42 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಜಿಲ್ಲಾಡಳಿತ ಭವನಕ್ಕೆ ಮತ್ತಷ್ಟು ಕೊಠಡಿ ಸೇರಿಸಬಹುದಿತ್ತು ಎಂಬ ಮಾತು ಹರಿದಾಡುತ್ತಿದೆ.
ಬೆಂಗಳೂರಿನಿಂದ ಶ್‌ಟಿ ಆಗಿಲ್ಲ: ಜಿಲ್ಲಾಡಳಿತ ಭವನಕ್ಕೆ ಬಹುತೇಕ ಇಲಾಖೆಗಳು ವರ್ಗಾವಣೆಯಾಗಿಲ್ಲ. ಎರಡು ಅಂತಸ್ತಿನ ಭವನದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಪಂ ವ್ಯಾಪ್ತಿಯ 30 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇನ್ನೂ ಐದಾರು ಇಲಾಖೆಗಳ ಹಲವು ಕಚೇರಿಗಳು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿವೆ. ಈಗಿರುವ ಸಂಕೀರ್ಣದಲ್ಲಿ ಕಚೇರಿಗಳ ಸ್ಥಳಾಂತರಕ್ಕೆ ಅವಕಾಶ ಇಲ್ಲವಾಗಿದೆ. ಎಲ್ಲ ಕೊಠಡಿಗಳಲ್ಲಿ ವಿವಿಧ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಂಜಿನಿಯರಿಂಗ್, ಲೋಕೋಪಯೋಗಿ, ತರಬೇತಿ ಕೇಂದ್ರ, ವಾರ್ತಾ ಇಲಾಖೆ ಸೇರಿ ಹಲವು ಇಲಾಖೆ ಬೆಂಗಳೂರಿನಲ್ಲಿದ್ದು, ಇವುಗಳ ಸ್ಥಳಾಂತರಕ್ಕಾಗಿ ಹೆಚ್ಚುವರಿ ಕಟ್ಟಡ ನಿರ್ಮಿಸಲು ಜಿಪಂ ಯೋಜನೆ ರೂಪಿಸಿತ್ತು. ಈಗಿರುವ ಜಿಲ್ಲಾ ಸಂಕೀರ್ಣದ ಹಿಂಭಾಗದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುಮೋದನೆಯೂ ದೊರೆತಿದೆ ಎನ್ನಲಾಗಿದೆ.
ಹೇಗಿರಲಿದೆ ಹೆಚ್ಚುವರಿ ಕಟ್ಟಡ: ಜಿಲ್ಲಾಡಳಿತ ಭವನದಲ್ಲಿ ವಾಹನ ನಿಲುಗಡೆಗೆ ಜಾಗ ಮೀಸಲಿಟ್ಟಿಲ್ಲ. ಭವನದ ತಡೆಗೋಡೆ ಸುತ್ತ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುತ್ತಿದೆ. ಆದ್ದರಿಂದ ಹೆಚ್ಚುವರಿ ಕಟ್ಟಡ ನಿರ್ಮಾಣದ ವೇಳೆ ನೆಲಮಹಡಿಯನ್ನು ಸಂಪೂರ್ಣವಾಗಿ ಪಾರ್ಕಿಂಗ್‌ಗೆ ಮೀಸಲಿಡಲಾಗುವುದು. ಮೊದಲ ಮಹಡಿಯಲ್ಲಿ ಜಿಪಂ ಇಂಜಿನಿಯರಿಂಗ್ ಇಲಾಖೆ, ಮೀಟಿಂಗ್‌ಹಾಲ್, ನೀರು ಪರೀಕ್ಷಾ ಲ್ಯಾಬ್, ಎರಡನೇ ಮಹಡಿಯಲ್ಲಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರಗಳಿಗೆ ನೀಡಲು ಚಿಂತನೆ ನಡೆಸಲಾಗಿದ್ದು, ನೀಲಿನಕ್ಷೆ ರೂಪುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಪಂ ಇಂಜಿನಿಯರಿಂಗ್ ವಿಭಾಗ ಉಸ್ತುವಾರಿ ವಹಿಸಿಕೊಂಡಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎನ್ನಲಾಗಿದೆ. ಹೆಚ್ಚುವರಿ ಕಟ್ಟಡದಿಂದ ಎಲ್ಲ ಇಲಾಖೆಗಳು ಒಂದೇ ಸೂರಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂಬುದೇನೋ ಸರಿ, ಆದರೆ ಮೊದಲೇ ಈ ಬಗ್ಗೆ ಚಿಂತನೆ ನಡೆಸಿದ್ದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ನಷ್ಟವಾಗುತ್ತಿರಲಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ತೆರಿಗೆ ಹಣ ದುರುಪಯೋಗವಾಗಬಾರದು, ಮೊದಲೇ ಸರಿಯಾಗಿ ಪರಿಶೀಲಿಸಿದ್ದರೆ ಹೆಚ್ಚುವರಿ ಹಣ ಉಳಿಯುತ್ತಿತ್ತು. ಈಗ ಹೆಚ್ಚುವರಿ ಕಟ್ಟಡ ನಿರ್ಮಾಣ ವೇಳೆಯಾದರೂ ಎಲ್ಲವನ್ನು ಪರಿಶೀಲಿಸಿ ಮೂಲಸೌಕರ್ಯಗಳೊಂದಿಗೆ ಕಟ್ಟಡ ನಿರ್ಮಾಣವಾಗಬೇಕು. ಮತ್ತೊಮ್ಮೆ ಹಣ ದುರುಪಯೋಗವಾಗಬಾರದು. ನಿಸರ್ಗ ನಾರಾಯಣಸ್ವಾಮಿ, ಶಾಸಕ ದೇವನಹಳ್ಳಿ