ಬೆಂಗಳೂರು: ಮುಂಗಾರು ಮುಗಿಯಲು 2 ವಾರ ಬಾಕಿ ಇದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಈ ಮೂಲಕ 3 ವರ್ಷದ ಬಳಿಕ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವುದು ಗಮನಾರ್ಹ. ಉತ್ತಮ ಮಳೆಯಾದ ಪರಿಣಾಮ ಈ ಬಾರಿ 70 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ.
ಜೂ 1ರಿಂದ ಸೆ.16ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ ರಾಜ್ಯದಲ್ಲಿ 766 ಮಿಮೀ ಮಳೆಯಾಗುವ ಬದಲು 918 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.20 ಅಧಿಕವಾಗಿ ಮಳೆಯಾಗಿದೆ. ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 2,974 ಮಿಮೀ ಮಳೆಯಾಗಬೇಕಿತ್ತು. ಆದರೆ, 3,581 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.20 ಹೆಚ್ಚು ಬಿದ್ದಿದೆ. ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ 1,469 ಮಿಮೀ ಮಳೆ ಬದಲಾಗಿ 1,694 ಸುರಿದಿದ್ದು, ವಾಡಿಕೆಗಿಂತ ಶೇ.15 ಅಧಿಕ ಮಳೆಯಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಂತೆ 397 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 481 ಮಿಮೀ ಬಿದ್ದಿದ್ದು, ಶೇ.21 ಅಧಿಕ ವರ್ಷಧಾರೆಯಾಗಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 292 ಮಿಮೀ ಮಳೆಯಾಗುವ ಬದಲು 371 ಮಿಮೀ ಸುರಿದಿದ್ದು, ಶೇ.27ಗಿಂತ ಅಧಿಕ ವರ್ಷಧಾರೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೆ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಕೊಡಗಿನಲ್ಲಿ ವಾಡಿಕೆಯಷ್ಟೇ ವರ್ಷಧಾರೆಯಾಗಿದೆ.
70 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ
ಉತ್ತಮ ಮುಂಗಾರು ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 70 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. 2023ರ ಆ.30ರವರೆಗೆ 66 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ ಅಂದರೆ 2024ರ ಅ.30ರವರೆಗೆ 70 ಲಕ್ಷ ಹೆಕ್ಟರ್ ಪ್ರದೇಶಗಳಲ್ಲಿ ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ಈ ಮೂಲಕ ಶೇ.94ರಷ್ಟು ಗುರಿ ಮುಟ್ಟಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 3.5 ಲಕ್ಷ ಹೆಕ್ಟೇರ್ಗಿಂತ ಅಧಿಕ ಪ್ರದೇಶಗಳಲ್ಲಿ ಬಿತ್ತನೆಯಾಗಿರುವುದು ಒಳ್ಳೆಯ ಬೆಳವಣಿಗೆ.10.28 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಗೋಧಿ ಸೇರಿ ಏಕದಳ ಧಾನ್ಯ ಬಿತ್ತನೆ ಮಾಡಿದರೆ, 11.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಮುಟಕಿ ಸೇರಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾ ಅವರೆ, ಕುಸುಬೆ, ಅಗಸೆ ಸೇರಿ ಇತರೆ ಎಣ್ಣೆಕಾಳುಗಳು ಬಿತ್ತನೆ ಮಾಡಲಾಗಿದೆ. 8.57 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಹತ್ತಿ, ಕಬ್ಬು, ತಂಬಾಕು ಸೇರಿ ಇತರೆ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ.
10 ಜಿಲ್ಲೆಗಳಲ್ಲಿ ಶೇ.100ರಷ್ಟು ಬಿತ್ತನೆ ಪೂರ್ಣ
ಬೆಳಗಾವಿ, ಬೀದರ್, ದಕ್ಷಿಣ ಕನ್ನಡ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ವಿಜಯನಗರ ಜಿಲ್ಲೆಯಲ್ಲಿ ಶೇ.100ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಯಾದಗಿರಿ, ವಿಜಯಪುರ, ಉಡುಪಿ, ತುಮಕೂರು, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ಬೆಂಗಳೂರು ನಗರ, ಬೆಂ.ಗ್ರಾಮಾಂತರದಲ್ಲಿ ಶೇ.95ರಷ್ಟು ಬಿತ್ತನೆಯಾಗಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಅಂದರೆ ಶೇ.60ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ.
ಆಹಾರ ಉತ್ಪಾದನೆ ಹೆಚ್ಚಳ
ಕಳೆದ ವರ್ಷ ಮಳೆ ಕೊರತೆಯಿಂದ ಆಹಾರ ಉತ್ಪಾದನೆ ಕುಂಠಿತವಾಗಿತ್ತು. ಈ ಬಾರಿ ಮುಂಗಾರು ಆಶಾದಾಯಕವಾಗಿರುವ ಕಾರಣ ನಿಗದಿಗಿಂತ ಹೆಚ್ಚು ಆಹಾರ ಉತ್ಪಾದನೆಯಾಗಲಿದೆ. ರೈತರಿಗೆ ಒಳ್ಳೆಯ ವರಮಾನ ಸಿಗಲಿದೆ. ಏಕದಳ, ದ್ವಿದಳ ಧಾನ್ಯ ಸೇರಿ ವಾಣಿಜ್ಯ ಬೆಳೆಗಳ ಉತ್ಪಾದನೆಯು ಗಣನೀಯವಾಗಿ ಏರಿಕೆಯಾಗಲಿದೆ.