ಜಿಲ್ಲೆ

ಇನ್ನೂರಕ್ಕೂ ಹೆಚ್ಚು ಪಟಾಕಿ ಅವಘಡ; 150 ಜನರ ಕಣ್ಣಿಗೆ ಹಾನಿ, ಕೆಲ ಮಕ್ಕಳ ಸ್ಥಿತಿ ಗಂಭೀರ

ಬೆಂಗಳೂರು: ನ್ಯಾಯಾಲಯದ ನಿರ್ಬಂಧ, ಸರ್ಕಾರದ ನಿಯಮ, ವಿವಿಧ ಸಂಸ್ಥೆಗಳ ಜಾಗೃತಿಯ ನಡುವೆಯೂ ದೀಪಾವಳಿ ಹಬ್ಬದ ಸಂಭ್ರಮ ಪಟಾಕಿ ಅವಘಡದಿಂದಾಗಿ ನೂರಾರು ಜನರಿಗೆ ಸಂಕಷ್ಟವಾಗಿ ಬದಲಾಗಿದೆ.

ನಿಗದಿತ ಅವಧಿ, ಕೇವಲ ಅಪಾಯ ಪ್ರಮಾಣ ಕಡಿಮೆ ಇರುವ, ಪರಿಸರಕ್ಕೆ ಹೆಚ್ಚಿನ ಮಾಲಿನ್ಯವನ್ನು ತಂದೊಡ್ಡದ ಹಸಿರು ಪಟಾಕಿಯನ್ನಷ್ಟೇ ಬಳಸಬೇಕೆಂಬ ನಿಯಮ ಇದ್ದಾಗ್ಯೂ ಕಳೆದ ವರ್ಷಗಳಿಗಿಂತ ಈ ವರ್ಷ ಬೆಂಗಳೂರಿನಲ್ಲಿ ಪಟಾಕಿ ಅವಘಡ ಹೆಚ್ಚಿಗೆ ಆಗಿರುವ ಬಗ್ಗೆ ವರದಿಯಾಗಿದೆ.

ಆಸ್ಪತ್ರೆಗೆ ದಾಖಲಾಗಿ ಕೆಲವರು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರೆ; ಕೆಲವರು ಗಂಭೀರ ಗಾಯಗಳಿಂದ ಬಳಲುತ್ತಿದ್ದಾರೆ. ಕೆಲವು ಚಿಕ್ಕ ಮಕ್ಕಳು ಶಸ ಚಿಕಿತ್ಸೆಗೆ ಒಳಗಾಗಬೇಕಾದ ಗಂಭೀರ ಸ್ಥಿತಿಯಲ್ಲಿದ್ದು, ಬೆರಳೆಣಿಕೆಯ ಮಕ್ಕಳು ದೃಷ್ಟಿ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ 54 ಪ್ರಕರಣ ದಾಖಲು

ಮಿಂಟೊ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಒಟ್ಟು 54 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹೊರರೋಗಿ ವಿಭಾಗದಲ್ಲಿ 39 ಪ್ರಕರಣಗಳು ದಾಖಲಾಗಿದ್ದು, 15 ಜನ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಿಂಟೋ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ರಂಜಿತ ತಿಳಿಸಿದ್ದಾರೆ.

ಈ ಒಟ್ಟಾರೆ ಪ್ರಕರಣಗಳಲ್ಲಿ 20ಜನ ವಯಸ್ಕರು ಹಾಗೂ 34 ಜನ ಮಕ್ಕಳಿದ್ದು, ಅವರಲ್ಲಿ 25 ಜನ ಗಂಭೀರ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನುಳಿದಂತೆ 29 ಜನ ಸಣ್ಣಪುಟ್ಟ ಕಣ್ಣಿನ ಗಾಯಗಳಿಗೆ ತುತ್ತಾಗಿದ್ದಾರೆ. 5 ಜನ ಗಾಯಾಳುಗಳು ಈಗಾಗಲೇ ಶಸಚಿಕಿತ್ಸೆಗೆ ಒಳಗಾಗಿದ್ದು, 14 ಜನರು ಸಾಮಾನ್ಯ ಚಿಕಿತ್ಸೆ ಪಡೆದಿದ್ದಾರೆ. 25 ಜನ ಅಕ್ಕಪಕ್ಕದಲ್ಲಿ ನೋಡುತ್ತಾ ನಿಂತಿದ್ದವರು ಕೂಡ ಕಣ್ಣಿನ ಗಾಯಗಳಿಗೆ ತುತ್ತಾಗಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ

ನಾರಾಯಣ ನೇತ್ರಾಲಯದಲ್ಲಿ ಮೂರು ದಿನಗಳಲ್ಲಿ 73 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 38 ವಯಸ್ಕರು ಹಾಗೂ 35 ಮಕ್ಕಳು ಸೇರಿದ್ದಾರೆ. ಇದರಲ್ಲಿ ಸ್ವತಃ ಪಟಾಕಿ ಹೊಡೆಯುವವರಿಗಿಂತ ನೋಡುತ್ತಾ ನಿಂತವರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳಾಗಿದ್ದು, ಅಂತಹ 37 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟಾರೆ ಪ್ರಕರಣಗಳಲ್ಲಿ ಸಾಮಾನ್ಯವಾದ ಅಲ್ಪ ಕಾರ್ನಿಯಲ್ ಸವೆತ ಸಮಸ್ಯೆಯಿಂದ ಹಿಡಿದು ಲೆನ್ಸ್ ಡಿಸ್ ಲೋಕೇಶನ್ ವರೆಗಿನ ಗಂಭೀರ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ.

ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ನಾಲ್ವರು ವಯಸ್ಕರು ಮತ್ತು 14 ಮಕ್ಕಳು ಸೇರಿದ್ದಾರೆ. ವಯಸ್ಕರಲ್ಲಿ 52 ವರ್ಷದ ಹಿರಿಯರು ಹಾಗೂ ಮಕ್ಕಳಲ್ಲಿ 3 ವರ್ಷದ ಚಿಕ್ಕ ಬಾಲಕಿ ಇದ್ದು ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಗಾಯದ ತೀವ್ರತೆಗನುಗುಣವಾಗಿ ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್ನುಳಿದಂತೆ ನಗರದಲ್ಲಿರುವ ಅಗರವಾಲ್ ಕಣ್ಣಿನ ಆಸ್ಪತ್ರೆ, ಶೇಖರ್ ನೇತ್ರಾಲಯ ಸೇರಿದಂತೆ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಈ ವೆರೆಗೆ ಒಟ್ಟು 150ಕ್ಕೂ ಹೆಚ್ಚು ಜನ ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆಗೆ ಒಳಗಾಗಿದ್ದು, 50ಕ್ಕೂ ಹೆಚ್ಚು ಜನ ಬೇರೆ ಬೇರೆ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

"ಈ ವರ್ಷ ದಾಖಲಾದ ಪ್ರಕರಣಗಳಲ್ಲಿ ಸ್ವತಃ ಪಟಾಕಿ ಹೊಡೆಯುವವರಿಗಿಂತ ನೋಡುತ್ತಾ ನಿಂತವರೇ ಹೆಚ್ಚಾಗಿದ್ದಾರೆ. ಸೂಕ್ತ ಅಂತರ, ರಕ್ಷಣಾ ಕನ್ನಡಕದ ಅಳವಡಿಕೆಯಂತಹ ಮುಂಜಾಗ್ರತೆ ವಹಿಸಿದ್ದಲ್ಲಿ ಇಂತಹ ಅವಘಡಗಳನ್ನು ತಡೆಯಬಹುದಿತ್ತು. ಮುಂದಾದರೂ ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ"

-ಡಾ. ರೋಹಿತ್ ಶೆಟ್ಟಿ, ಅಧ್ಯಕ್ಷರು, ನಾರಾಯಣ ನೇತ್ರಾಲಯ