ಯಲ್ಲಾಪುರ: ತಾಲೂಕಿನ ಶಿರಸಿ ರಸ್ತೆಯ ತೂಕದಬೈಲ್ ಬಳಿ 30 ಕ್ಕೂ ಹೆಚ್ಚು ನಾಯಿಗಳ ಶವ ಪತ್ತೆಯಾಗಿದ್ದು, ಯಾರೋ ಕೊಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದು ವಾರದಿಂದ ಶಿರಸಿ-ಯಲ್ಲಾಪುರ ರಸ್ತೆ ಮಾರ್ಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಬೇರೆ ಊರಿನ ನಾಯಿಗಳನ್ನು ನಿರಂತರವಾಗಿ ಇಲ್ಲಿ ತಂದು ಬಿಡಲಾಗುತ್ತಿದ್ದು, ಅಲ್ಲಲ್ಲಿ ನಾಯಿಗಳು ಸಾವನ್ನಪ್ಪುತ್ತಿರುವುದೂ ಕಂಡು ಬಂದಿತ್ತು. ಆದರೆ ಇದೀಗ ಒಂದೇ ಕಡೆ 30ಕ್ಕೂ ನಾಯಿಗಳ ಶವ ಬಿದ್ದಿರುವುದರಿಂದ ವಿಷ ಪ್ರಾಶನದಿಂದ ನಾಯಿಗಳನ್ನು ಕೊಲ್ಲುತ್ತಿರುವ ಅನುಮಾನಗಳು ವ್ಯಕ್ತವಾಗಿದೆ.
ಈ ಭಾಗದಲ್ಲಿ ರೋಗಗ್ರಸ್ಥ ನಾಯಿಗಳು ಇಲ್ಲಿ ಹೆಚ್ಚಿದ್ದು, ಬೈಕ್ ಸವಾರರ ಮೇಲೆ ಆಕ್ರಮಣ ನಡೆಸಿದ ದೂರುಗಳಿವೆ. ಕೆಲ ನಾಯಿಗಳು ಜೊಲ್ಲು ಸುರಿಸುತ್ತಿದ್ದರೆ ಇನ್ನೂ ಕೆಲವು ನಾಯಿಗಳ ದೇಹ ಗಾಯ-ಕಜ್ಜಿಗಳಿಂದ ಕೂಡಿವೆ. ಸಾವನ್ನಪ್ಪಿದ ನಾಯಿಗಳ ಶವ ಇದೀಗ ಕೊಳೆಯುತ್ತಿದ್ದು, ಆ ಪರಿಸರ ಹಾಳಾಗಿದೆ. ಹೀಗಾಗಿ ಆ ಭಾಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಇನ್ನು ವಿಷಪ್ರಾಶನದಿಂದ ಆ ನಾಯಿಗಳು ಸಾವನ್ನಪ್ಪಿದ್ದರೆ ಆ ನಾಯಿಗಳನ್ನು ಭಕ್ಷಿಸುವ ವನ್ಯಜೀವಿ-ಪಕ್ಷಿಗಳ ಆರೋಗ್ಯದ ಮೇಲೂ ದುಷ್ಪರಿಣಾಮವಾಗುವ ಸಾಧ್ಯತೆಗಳಿವೆ.
ಟ್ರಕ್ನಲ್ಲಿ ನಾಯಿಗಳನ್ನು ತಂದು ಬಿಟ್ಟಿರುವ ಬಗ್ಗೆ ಜನ ಸ್ಥಳೀಯ ಪಂಚಾಯತಿಗೆ ತಿಳಿಸಿದ್ದರು. ನಾಯಿ ತಂದುಬಿಟ್ಟವರು ಯಾರು ಎಂದು ಗೊತ್ತಾಗಿಲ್ಲ. ನಾಯಿ ಸಾವನ್ನಪ್ಪಿದ ಬಗ್ಗೆಯೂ ಮಾಹಿತಿ ಇರಲಿಲ್ಲ ಎಂದು ಕಂಪ್ಲಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಬೋವಿವಡ್ಡರ ಪ್ರತಿಕ್ರಿಯಿಸಿದ್ದಾರೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾವನ್ನಪ್ಪಿದ ನಾಯಿಗಳನ್ನು ದಫನ್ ಮಾಡಲು ಕ್ರಮ ಜರುಗಿಸಲಾಗಿದೆ ಎಂದು ಪಿಡಿಒ ರವಿ ಪಟಗಾರ ತಿಳಿಸಿದ್ದಾರೆ.
ಈ ಪ್ರಕರಣದ ಕ್ರಮದ ಕುರಿತಂತೆ ಶೀಘ್ರದಲ್ಲಿ ಪೋಲೀಸರಿಗೆ ದೂರು ನೀಡಲಾಗುವುದೆಂದು ಕಂಪ್ಲಿ ಗ್ರಾ.ಪಂ. ಸದಸ್ಯ ಗಣೇಶ ರೋಖಡೆ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.