ಬೆಂಗಳೂರಿನ ಹೊಸಕೆರೆಹಳ್ಳಿ ರಾಜಾಕಾಲುವೆ ಹತ್ತಿರದ ಪರಿಸ್ಥಿತಿ. 
ಜಿಲ್ಲೆ

ರಾಜಧಾನಿಯಲ್ಲೇ ಹತ್ತಾರು ಬಡಾವಣೆ ಜಲಾವೃತ!

raghukittur

ಬೆಂಗಳೂರು: ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ 10ಕ್ಕೂ ಹೆಚ್ಚು ಬಡಾವಣೆಗಳು ಜಲಾವೃತವಾಗಿವೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಶುಕ್ರವಾರ ಸಂಜೆ 4 ಗಂಟೆ ನಂತರ ಗುಡುಗು, ಸಿಡಿಲುಸಹಿತ ಸುರಿದ ಮಳೆಗೆ ರಾಜಧಾನಿ ನಿವಾಸಿಗಳು ಬೆಚ್ಚಿಬೀಳುವಂತಾಯಿತು. ನೂರಾರು ಮನೆಗಳು ಜಲಾವೃತಗೊಂಡವು.

ಬೆಳಗ್ಗೆ ಖಾಲಿ ಮಾಡಿದ ನೀರು, ಸಂಜೆ ತುಂಬಿತು: ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಹಲವೆಡೆ 200ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಮನೆಯೊಳಗೆ ಬಂದಿದ್ದ ನೀರನ್ನು ಶುಕ್ರವಾರ ಬೆಳಗ್ಗೆ ತೆರವು ಮಾಡಲಾಗಿತ್ತು. ಆದರೆ, ಸಂಜೆ ಮತ್ತೆ ಭಾರಿ ಮಳೆಯಾಗಿ ಸಮಸ್ಯೆ ಮತ್ತೆ ಹಿಂದಿನಂತಾಯಿತು.

ರಾಜಕಾಲುವೆ ನೀರು ನುಗ್ಗಿ ಅವಾಂತರ: ಹೊಸ ಕೆರೆಹಳ್ಳಿಯ ಗುರುದತ್ತ ಲೇಔಟ್​ನಲ್ಲಿ ರಾಜಕಾಲುವೆ ಗೋಡೆ ಕುಸಿದು ಮೂರು ದಿನಗಳಾದರೂ ಇನ್ನೂ ಸರಿಪಡಿಸಿಲ್ಲ. ನಿರಂತರ ಮಳೆಯಿಂದಾಗಿ ದುರಸ್ತಿ ಕೆಲಸ ನಡೆಸಲಾಗುತ್ತಿಲ್ಲ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ಸಮರ್ಥನೆ. ಆದರೆ ಈ ರಾಜಕಾಲುವೆ ಗುರುದತ್ತ ಲೇಔಟ್, ದತ್ತಾತ್ರೇಯನಗರ, ಇಟ್ಟಮಡು ಮತ್ತಿತರ ಬಡಾವಣೆಗಳ ಜನರ ಜೀವನವನ್ನು ನರಕವಾಗಿಸಿದೆ. ಈ ಭಾಗದಲ್ಲಿಯೇ 100ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಪುಟ್ಟೇನಹಳ್ಳಿ, ಕೋಣನಕುಂಟೆ, ಚಿಕ್ಕಲ್ಲಸಂದ್ರ, ಜೆ.ಪಿ.ನಗರ, ಕುಮಾರ ಸ್ವಾಮಿ ಲೇಔಟ್, ಪ್ರಮೋದ್ ಲೇಔಟ್, ಕಮ್ಮನಹಳ್ಳಿ, ಬಾಗಲಗುಂಟೆ, ಕೋಣನಕುಂಟೆ, ಯಲಚೇನಹಳ್ಳಿ, ಬೇಗೂರು ಮುಂತಾದೆಡೆ ಸಣ್ಣ ಕಟ್ಟಡಗಳಷ್ಟೇ ಅಲ್ಲದೆ, ಅಪಾರ್ಟ್ ಮೆಂಟ್​ಗಳ ಬೇಸ್​ವೆುಂಟ್​ಗೆ ನೀರು ನುಗ್ಗಿ ವಾಹನಗಳು ಜಲಾವೃತವಾಗಿವೆ.

ತೇಲಿದ ಕಾರುಗಳು!

ಮಳೆನೀರಿನಿಂದಾಗಿ ವಸತಿ ಸಮುಚ್ಚಯಗಳ ತಳಮಹಡಿಯಲ್ಲಿ ನಿಲ್ಲಿಸಿದ್ದ ಕಾರುಗಳು ದೋಣಿಗಳಂತೆ ತೇಲಿದವು. ಇಟ್ಟಮಡು ಪ್ರದೇಶದಲ್ಲಿ ಹತ್ತಾರು ಕಾರುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಇಟ್ಟಮಡುವಿನಲ್ಲಿ ಮಳೆಯಿಂದಾಗಿ ರಸ್ತೆ ಜಲಾವೃತವಾಗಿದ್ದರಿಂದ ಮನೆ ಕಾಂಪೌಂಡ್​ ಏರಿ ಮನೆಯತ್ತ ಸಾಗಿದ ಸ್ಥಳೀಯರು.

ಜನರ ಓಡಾಟಕ್ಕೆ ಎಲ್ಲೂ ಜಾಗವಿಲ್ಲ

ದತ್ತಾತ್ರೇಯ ಬಡಾವಣೆ, ಇಟ್ಟಮಡು, ಗುರುದತ್ತ ಲೇಔಟ್, ಪ್ರಮೋದ್ ಲೇಔಟ್​ಗಳಲ್ಲಿ ವಾಹನಗಳ ಸಂಚಾರವಿರಲಿ, ಜನರ ಓಡಾಟಕ್ಕೂ ಅವಕಾಶವಿಲ್ಲ ದಂತಾಗಿದೆ. ಕೆಲವೆಡೆ ಜನರು ನೆಲಮಹಡಿಯಲ್ಲಿರಲಾಗದೆ ಮೊದಲ ಮಹಡಿಗೆ ಹೋಗಿ ರಕ್ಷಣೆ ಪಡೆದಿದ್ದು ಕಂಡುಬಂತು. ಎರಡು ಅಗ್ನಿಶಾಮಕ ದಳ ವಾಹನಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು. ಮಳೆಯಿಂದ ಗವಿ ಗಂಗಾಧರೇಶ್ವರ ದೇವಸ್ಥಾನ ಕಾಂಪೌಂಡ್​ಗೆ ಹಾನಿಗೊಳಗಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ.

ಶ್ರೀಗವಿಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಕುಸಿದು ಬಿದ್ದ ತಡೆಗೋಡೆ.

ಕೊಚ್ಚೆಗುಂಡಿಗಳಾಗಿ ಬದಲಾದ ರಸ್ತೆಗಳು

ಮಳೆ ತಂದೊಡ್ಡಿದ ಸಮಸ್ಯೆಗಳು ಸಾಲದೆಂಬಂತೆ ಬಿಬಿಎಂಪಿ, ಜಲಮಂಡಳಿ ಕಾಮಗಾರಿಗಳು ಕಿರಿಕಿರಿ ಉಂಟುಮಾಡಿದವು. ಮಲ್ಲೇಶ್ವರ, ಕಾಟನ್​ಪೇಟೆ, ಚಾಮರಾಜಪೇಟೆ ಮತ್ತಿತರೆಡೆ ರಸ್ತೆ ದುರಸ್ತಿ, ಒಳಚರಂಡಿ ಪೈಪ್ ಬದಲಾವಣೆಯಂತಹ ಕಾಮಗಾರಿ ಆಮೆಗತಿಯಲ್ಲಿ ಸಾಗಿವೆ. ಇದೀಗ ಮಳೆ ಸುರಿದ ಪರಿಣಾಮ ಆ ರಸ್ತೆಗಳೆಲ್ಲವೂ ಕೊಚ್ಚೆಗುಂಡಿಯಂತಾಗಿವೆ.

ಮಕ್ಕಳ ರಕ್ಷಣೆ

ದತ್ತಾತ್ರೇಯನಗರದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದು, ನೀರಿನಲ್ಲಿ ಸಿಲುಕಿದ್ದ 6 ತಿಂಗಳ ಇಬ್ಬರು ಮಕ್ಕಳನ್ನು ಸ್ಥಳೀಯ ಯುವಕನೊಬ್ಬ ರಕ್ಷಿಸಿದ್ದಾನೆ.ಭಾರಿ ಮಳೆಯಿಂದಾಗಿ ದತ್ತಾತ್ರೇಯ ನಗರದಲ್ಲಿ ಪ್ರವಾಹ ಉಂಟಾಗಿದ್ದು, ಮನೆಗಳೆಲ್ಲ ನೀರಿನಲ್ಲಿ ಮುಳುಗಿದೆ. ಈ ವೇಳೆ ಮಗುವೊಂದು ನೀರಿನಲ್ಲಿ ತೇಲಿ ಹೋಗುತ್ತಿತ್ತು. ಅದನ್ನು ಗಮನಿಸಿದ ಸ್ಥಳೀಯ ಯುವಕ ಪ್ರವಾಹವನ್ನು ಲೆಕ್ಕಿಸದೆ ಮಕ್ಕಳನ್ನು ರಕ್ಷಿಸಿದ್ದಾನೆ.

ಮಳೆ ನೀರು ನುಗ್ಗಿ ನೆನೆದುಹೋದ ದಿನಸಿ ಪದಾರ್ಥಗಳನ್ನು ಸಂಗ್ರಹಿಸಿದ ಮಹಿಳೆ.

ಅಂಡರ್​ಪಾಸ್​ಗಳಲ್ಲಿ ಹೆಚ್ಚು ಸಮಸ್ಯೆ

ಮಳೆಯಿಂದಾಗಿ ಬೆಂಗಳೂರಿನ ಬಹುತೇಕ ಅಂಡರ್​ಪಾಸ್​ಗಳು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ. ಕಾವೇರಿ ಜಂಕ್ಷನ್, ಓಕಳಿಪುರ ಕೆಳಸೇತುವೆಗಳಲ್ಲಿ ಭಾರಿ ಪ್ರಮಾಣದ ನೀರು ನಿಂತಿತ್ತು. ಮೈಸೂರು ರಸ್ತೆ ಮೇಲ್ಸೇತುವೆ ಬಳಿಯೂ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾ ಯಿತು. ಮಲ್ಲೇಶ್ವರದ ಬಿಬಿಎಂಪಿ ಕಚೇರಿ ಎದುರಿನ ರಸ್ತೆಯಲ್ಲೂ ನೀರು ನಿಂತಿದ್ದರಿಂದ ಅನ್ಯ ಮಾರ್ಗವಿಲ್ಲದೇ ವಾಹನಸವಾರರು ಪರದಾಡಿದರು.

ವಿದ್ಯುತ್ ವ್ಯತ್ಯಯ

ಗುಡುಗುಸಹಿತ ಭಾರಿ ಮಳೆ ಸುರಿದ ಪರಿಣಾಮ ನಗರದ ಬಹುತೇಕ ಕಡೆ ವಿದ್ಯುತ್ ವ್ಯತ್ಯಯವಾಗಿತ್ತು. 10ಕ್ಕೂ ಹೆಚ್ಚಿನ ಭಾಗದಲ್ಲಿ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬಗಳು ಮುರಿದು ಬಿದ್ದು ಅವಾಂತರ ಸೃಷ್ಟಿಯಾಗಿತ್ತು. ಹೀಗಾಗಿ ಜನರು ರಾತ್ರಿಯಿಡೀ ಕತ್ತಲಲ್ಲಿ ಕಳೆಯುವಂತಾಯಿತು.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

ರಾಜರಾಜೇಶ್ವರಿನಗರದಲ್ಲಿ 10.4 ಸೆಂಟಿಮೀಟರ್, ಕೆಂಗೇರಿ 10.3, ವಿದ್ಯಾಪೀಠ 9.5, ಉತ್ತರಹಳ್ಳಿ 8.7, ಕುಮಾರಸ್ವಾಮಿ ಲೇಔಟ್ 8, ಬಸವನಗುಡಿ 8.1, ಜ್ಞಾನಭಾರತಿ 4.5, ಕೊಡಿಗೇಹಳ್ಳಿ 5.2, ಚಾಮರಾಜಪೇಟೆ 3.9, ನಾಗರಬಾವಿ 3.1, ಲಕ್ಕಸಂದ್ರ 5.4, ಬೊಮ್ಮನಹಳ್ಳಿ 5.3, ಕೋರಮಂಗಲ 4.2, ಸಾರಕ್ಕಿ 6.5, ಪಟ್ಟಾಭಿರಾಮನಗರ 6.1 ಹಾಗೂ ಕೋಣನಕುಂಟೆಯಲ್ಲಿ 5.8 ಸೆಂಟಿಮೀಟರ್ ಮಳೆಯಾಗಿದೆ.