ಶಿವಮೊಗ್ಗ: ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸುವುಕ್ಕೆ ಅವಕಾಶವಿಲ್ಲ. ಧರ್ಮದ ಹೆಸರಲ್ಲಿ ಮತಯಾಚನೆ ಮಾಡಿದ ರಾಜಕೀಯ ಮುಖಂಡರ ವಿರುದ್ಧ ಮೂರು ಪ್ರಕರಣ ದಾಖಲಿಸಿದ್ದು, ನೀತಿಸಂಹಿತೆ ಉಲ್ಲಂಘನೆ ಸಂಬಂಧಿಸಿ 60ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ದಾಖಲೆ ಇಲ್ಲದ 17 ಕೋಟಿ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದಲ್ಲಿ ಬುಧವಾರ ಸಂವಾದ ನಡೆಸಿದ ಅವರು, ಮೇ 7ರಂದು ಶಿವಮೊಗ್ಗ ಲೋಕಾಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಜಿಲ್ಲೆಯ ಜನರಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಜಾಗೃತಿಯಿದೆ. ಜನರು ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಏನೆಂದು ನಮಗೆ ಸಲಹೆ ನೀಡಿದ್ದಾರೆ. ಆರೋಗ್ಯಕರ ಸಮಾಜ ಇಲ್ಲಿದೆ ಎಂದು ತಿಳಿಸಿದರು.
ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಆರೇಳು ಗ್ರಾಮಗಳಲ್ಲಿ ನಾನಾ ಕಾರಣಕ್ಕೆ ಜನರು ಚುನಾವಣಾ ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಈಗಾಗಲೇ ಎರಡು ಗ್ರಾಮದ ಜನರ ಮನವೊಲಿಸಲಾಗಿದೆ. ಇನ್ನೆರಡು ಗ್ರಾಮಸ್ಥರ ಮನವೊಲಿಸುವ ಕೆಲಸ ಆಗುತ್ತಿದೆ. ನೆಟ್‌ವರ್ಕ್, ರಸ್ತೆ ಸೇರಿ ಮೂಲ ಸೌಕರ್ಯಗಳ ಬಗ್ಗೆ ದೂರುಗಳಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣೆ ಬಳಿಕ ಬಗೆಹರಿಸುವುದಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.