ಗುತ್ತಲ: ಮದುವೆ ಮನೆಯಲ್ಲಿ ಉಳಿದಿದ್ದ ಪಾಯಸವನ್ನು ಮಾರನೇ ದಿನ ಸೇವಿಸಿದ ಪರಿಣಾಮ 43ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಸಮೀಪದ ಮೇವುಂಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಪಾಯಸ ಸೇವಿಸಿದ ನಂತರ ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ತಕ್ಷಣವೇ ಅವರನ್ನು ಗುತ್ತಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. 43 ಮಕ್ಕಳ ಪೈಕಿ 21 ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದವರು.
ಗ್ರಾಮದ ವ್ಯಕ್ತಿಯೊಬ್ಬರ ವಿವಾಹದಲ್ಲಿ ಉಳಿದಿದ್ದ ಪಾಯಸವನ್ನು ವಸತಿ ಶಾಲೆಯ ಮಕ್ಕಳಿಗೆ ಸೇರಿ ಮನೆಯ ಹತ್ತಿರದವರಿಗೂ ನೀಡಿದ್ದರೂ, ಅನೇಕರು ಪಾಯಸ ಸೇವಿಸಿದ್ದಾರೆ. ಆದರೆ, ಅದರಲ್ಲಿ ಮಕ್ಕಳು ಮಾತ್ರ ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಹಲವರು ಚಿಕಿತ್ಸೆ ಪಡೆದು ಮನೆಗೆ ತೆರಳಿದರೆ, ಇನ್ನೂ ಕೆಲವರು ಹಾವೇರಿ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಹುಳ್ಯಾಳ, ಮೇವುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ಎಂ. ಗಡ್ಡದೇವರಮಠ ಹಾಗೂ ಶಿಕ್ಷಕರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.