ದೇವನಹಳ್ಳಿ : ಕರ್ನೂಲ್ ಬಳಿ ಸ್ಲೀಪರ್ ಕೋಚ್ ಬಸ್ ಅಗ್ನಿ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸಾರಿಗೆ ಇಲಾಖೆ ಅಪರ ಆಯುಕ್ತ್ತೆ ಓಂಕಾರೇಶ್ವರಿ, ಜಂಟಿ ಆಯುಕ್ತೆ ಶೋಭಾ ನೇತೃತ್ವ ತಂಡ ಗುರುವಾರ ದೇವನಹಳ್ಳಿ ನವಯುಗ ಟೋಲ್ ಬಳಿ ಕಾರ್ಯಾಚರಣೆ ನಡೆಸಿ ಸುರಕ್ಷತಾ ಕ್ರಮ ಅನುಸರಿಸದ 40ಕ್ಕೂ ಹೆಚ್ಚು ಖಾಸಗಿ ಸ್ಲೀಪರ್ ಕೋಚ್ ಬಸ್ಗಳನ್ನು ಜಪ್ತಿ ಮಾಡಿದರು. ಪ್ರಯಾಣಿಕರನ್ನು ಬದಲಿ ವ್ಯವಸ್ಥೆ ಮೂಲಕ ಬೆಂಗಳೂರಿಗೆ ಕಳುಹಿಸಿಕೊಟ್ಟರು. 45ಕ್ಕೂ ಹೆಚ್ಚು ಸಿಬ್ಬಂದಿ ತಂಡದೊಂದಿಗೆ ದೇವನಹಳ್ಳಿ ಟೋಲ್ ಬಳಿ ಹೊರರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಯಿತು. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಾಗೂ ಬಸ್ಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ತಪಾಸಣೆ ನಡೆಸಿ ನ್ಯೂನತೆ ಇರುವ 40ಕ್ಕೂ ಹೆಚ್ಚು ಬಸ್ಗಳನ್ನು ಜಪ್ತಿ ಮಾಡಿ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಪರ ಆಯುಕ್ತೆ ಓಂಕಾರೇಶ್ವರಿ ತಿಳಿಸಿದ್ದಾರೆ.