ಜಿಲ್ಲೆ

ಸಿಎಂ ಕ್ಷೇತ್ರದ ಬೆಂಬಲಿಗರಿಗೆ ಬಂಪರ್ ಕೊಡುಗೆ; 40ಕ್ಕೂ ಹೆಚ್ಚು ಮುಖಂಡರಿಗೆ ನಿಗಮ ಮಂಡಳಿ ಸ್ಥಾನಮಾನ

ಕೇಶವಮೂರ್ತಿ ವಿ.ಬಿ. ಹಾವೇರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರದ 40ಕ್ಕೂ ಹೆಚ್ಚು ಮುಖಂಡರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಬಂಪರ್ ಸ್ಥಾನ ಒಲಿದು ಬಂದಿದೆ. ಚುನಾವಣೆ ಸಂದರ್ಭದಲ್ಲಿ ಸಿಎಂ ತವರಿಗೆ ಬಾಗಿನ ರೂಪದಲ್ಲಿ ಭರ್ಜರಿ ಕೊಡುಗೆ ನೀಡುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಬಹುತೇಕ ನಿಗಮ ಮಂಡಳಿಗಳಿಗೆ ಉಪಾಧ್ಯಕ್ಷ, ನಿರ್ದೇಶಕರ ಸ್ಥಾನಕ್ಕೆ ಶಿಗ್ಗಾಂವಿ- ಸವಣೂರ ಭಾಗದ ಸಿಎಂ ಬೆಂಬಲಿಗರು ಆಯ್ಕೆಗೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನೇಮಕಾತಿಗೆ ಮಹತ್ವ ಬಂದಿದೆ.
ಸಿಎಂ ಬೊಮ್ಮಾಯಿ ಅವರ ಬೆಂಬಲಿಗರು, ಬಿಜೆಪಿಯ ಶಿಗ್ಗಾಂವಿ- ಸವಣೂರು ತಾಲೂಕಿನ ಮುಖಂಡರು ವಾಕರಸಾ ಸಂಸ್ಥೆ, ಲಿಡಕರ್, ಹೆಸ್ಕಾಂ, ಎಂಎಸ್‌ಐಎಲ್, ರಸ್ತೆ ಅಭಿವೃದ್ಧಿ ನಿಗಮ, ಜಂಗಲ್ ಲಾಡ್ಜ್, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕಿಯೋನಿಕ್ಸ್, ಕೆಆರ್‌ಐಡಿಎಲ್, ಕುಯುಐಡಿಎಫ್‌ಸಿ, ಸೇರಿದಂತೆ ವಿವಿಧ ನಿಗಮಗಳಲ್ಲಿ ಕ್ಷೇತ್ರದ 40ಕ್ಕೂ ಅಧಿಕ ಮುಖಂಡರು ಉಪಾಧ್ಯಕ್ಷ, ನಿರ್ದೇಶಕರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ನಿಗಮ ಮಂಡಳಿಗೆ ಆಯ್ಕೆಗೊಂಡಿರುವ ಹಲವರು ಅಧಿಕಾರೇತರ ಸ್ಥಾನಕ್ಕೆ ಆಯ್ಕೆಯಾಗಿದ್ದರೂ, ಮುಂದಿನ ಆದೇಶದವರೆಗೂ ಮುಂದುವರಿಯಲಿದ್ದಾರೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಕೊನೆಯ ಘಳಿಗೆಯಲ್ಲಿ ಆದರೂ ಈ ಅವಕಾಶ ಸಿಕ್ಕಿದೆಯಲ್ಲ ಎಂಬ ತೃಪ್ತಿ ಭಾವ ಹಲವರಲ್ಲಿದೆ. ಕೊನೆಯ ಅವಧಿಯಲ್ಲಿ ಈ ಅಧಿಕಾರ ಅನುಭವಿಸಿ ಮಾಜಿ ಆಗಲು ಏಕೆ ಈ ಅಧಿಕಾರ ಬೇಕು ಎಂದು ಕೆಲವರ ಅಭಿಪ್ರಾಯವಾಗಿದೆ.
ಕ್ಷೇತ್ರದಲ್ಲಿ ಸಿಎಂ ಹಿಡಿತ
ಈಗಾಗಲೇ ಯಾಟ್ರಿಕ್ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮದೇ ಆದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಸಿಎಂ ಆದ ಬಳಿಕವಂತೂ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ. ಗ್ರಾಮೀಣ ಭಾಗ ಸೇರಿದಂತೆ, ಎಲ್ಲ ವರ್ಗಗಳ ಮುಖಂಡರು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವತ್ತ ಸೂಕ್ಷ್ಮ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದೀಗ ನಿಗಮ ಮಂಡಳಿಗಳ ನೇಮಕದಿಂದ ಚುನಾವಣೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೋಟ್:
ಶಿಗ್ಗಾಂವಿ- ಸವಣೂರು ಜತೆಗೆ ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಕೆಲ ಮುಖಂಡರಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ಸಿಕ್ಕಿದೆ. ಇನ್ನೂ ಹಲವರ ನೇಮಕಾತಿ ನಡೆಯುವ ನಿರೀಕ್ಷೆ ಇದೆ.
ಶಿವಾನಂದ ಮ್ಯಾಗೇರಿ, ಉಪಾಧ್ಯಕ್ಷ, ವಾಕರಸಾ ಸಂಸ್ಥೆ